ಬೆಂಗಳೂರು; ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಒಳಪಡುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಂಜೂರಾದ ಜಮೀನಿನ ಕನ್ವರ್ಷನ್ ಸರಕಾರದ ಮಟ್ಟದಲ್ಲಿ ಆಗಬೇಕಿತ್ತು. ಇನ್ಮುಂದೆ ಸರಕಾರ ರಾಜ್ಯಾದ್ಯಂತ ಎಸ್ಸಿ, ಎಸ್ಟಿ ಅವರಿಗೆ 4 ಗುಂಟೆ (10 ಸೆಂಟ್ಸ್) ವರೆಗೆ ಸ್ವಂತ ವಾಸದ ಉದ್ದೇಶಕ್ಕೆ ಮನೆ ನಿರ್ಮಿಸಿಕೊಳ್ಳಲು ಜಿಲ್ಲಾಧಿಕಾರಿ ಹಂತದಲ್ಲಿಯೇ ಭೂ ಪರಿವರ್ತನೆಗೆ ಅವಕಾಶ ನೀಡಿ ಸರಕಾರ ಆದೇಶ ಹೊರಡಿಸಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದವರು ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಒಳಪಡುವ ಜಮೀನುಗಳಲ್ಲಿ ಸ್ವಂತ ವಾಸ್ತವ್ಯದ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಲು ಅರ್ಜಿ ಸಲ್ಲಿಸಿದ್ದಲ್ಲಿ ಈ ಪ್ರಕ್ರಿಯೆಗಳು ಸರಕಾರದ ಹಂತದಲ್ಲಿ ವಿಳಂಬವಾಗಿ ಸಂಕಷ್ಟಕ್ಕೆ ಒಳಗಾಗುತ್ತಿದ್ದರು. ಸರಕಾರದ ಈ ಆದೇಶದಿಂದಾಗಿ ಎಸ್ಸಿ, ಎಸ್ಟಿ ಸಮುದಾಯದವರಿಗೆ ವಿಳಂಬವಾಗದೆ ಮನೆ ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ. ಆದರೆ, ಈ ಜಮೀನು ಮಾರಾಟ ಮಾಡುವಂತಿಲ್ಲ. ಈ ಬಗ್ಗೆ ಕಂದಾಯ ಇಲಾಖೆ ಶನಿವಾರ ಸುತ್ತೋಲೆ ಹೊರಡಿಸಿದೆ.



