ಬೆಂಗಳೂರು: ನ್ಯಾ. ನಾಗಮೋಹನ್‌ದಾಸ್ ಸಮಿತಿ ವರದಿ ಆಧಾರಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದ್ದು, ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ. 15ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 3ರಿಂದ 7ಕ್ಕೆ ಹೆಚ್ಚಿಸಲು ಸರ್ಕಾರ ಒಪ್ಪಿಗೆ ನೀಡಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚಳ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕರೆದಿದ್ದ ಸರ್ವ ಪಕ್ಷಗಳ ಮುಖಂಡರ ಸಭೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.ಈ ಸಭೆಯ ನಂತರ ಸುದ್ದಿಗಾರರಿಗೆ ಸಭೆಯ ತೀರ್ಮಾನಗಳ ಬಗ್ಗೆ ವಿವರ ನೀಡಿದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಪರಿಶಿಷ್ಟ ಜಾತಿ ,ಪಂಗಡದ ಮೀಸಲಾತಿಯನ್ನು ಏರಿಕೆ ಮಾಡುವ ನ್ಯಾ. ನಾಗಮೋಹನ್ ದಾಸ್ ವರದಿ ಅನುಷ್ಠಾನ ಸಂಬಂಧ ಇಂದು ಮುಖ್ಯಮಂತ್ರಿಗಳು ಸಭೆ ನಡೆಸಿದ್ದು, ಈ ಸಭೆಯಲ್ಲಿ ವರದಿ ಜಾರಿ ಬಗ್ಗೆ ಚರ್ಚೆಗಳು ನಡೆಸಿ ಸಮಿತಿಯ ಪ್ರಮುಖ ಶಿಫಾರಸ್ಸುಗಳನ್ನು ಜಾರಿ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದರು.
ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ. 15ರಿಂದ 17 ಕ್ಕೆ, ಎಸ್ಟಿ ಮೀಸಲಾತಿಯನ್ನು ಶೇ. 3 ರಿಂದ 7ಕ್ಕೆ ಹೆಚ್ಚಳ ಮಾಡಲು ಸರ್ಕಾರ ತೀರ್ಮಾನಿಸಿದೆ. ಅದರಂತೆ ಪರಿಶಿಷ್ಟ ಜಾತಿ ಪಂಗಡದ ಮೀಸಲಾತಿಯನ್ನು ಏರಿಕೆ ಮಾಡಿ ಅದನ್ನು ಷೆಡ್ಯೂಲ್ 9 ರಲ್ಲಿ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಅವರು ಹೇಳಿದರು.
ಮೀಸಲಾತಿ ಪ್ರಮಾಣ ಶೇ. 50ರಷ್ಟು ಮೀರಬಾರದು ಎಂದು ನ್ಯಾಯಾಲಯದ ತೀರ್ಪಿದೆ. ಈಗ ಮೀಸಲಾತಿ ಪ್ರಮಾಣ ಹೆಚ್ಚಾಗುವುದರಿಂದ ನ್ಯಾಯಾಲಯ ತಗಾದೆ ತೆಗೆಯಬಹುದು. ಹಾಗಾಗಿ ಷಡ್ಯೂಲ್ 9 ರಲ್ಲಿ ಈ ಮೀಸಲಾತಿ ಏರಿಕೆಯನ್ನು ಸೇರಿಸುವುದರಿಂದ ನ್ಯಾಯಾಲಯ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಲು ಆಗುವುದಿಲ್ಲ. ತಮಿಳುನಾಡು, ರಾಜಸ್ಥಾನ ಸೇರಿದಂತೆ ಬೇರೆ ರಾಜ್ಯಗಳಲ್ಲೂ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿ ಷೆಡ್ಯೂಲ್ 9 ರಲ್ಲಿ ಸೇರ್ಪಡೆ ಮಾಡಲಾಗಿದೆ. ಹಾಗಾಗಿ ರಾಜ್ಯ ಸರ್ಕಾರವೂ ಷೆಡ್ಯೂಲ್ 9ರಲ್ಲಿ ಈ ಮೀಸಲಾತಿ ಹೆಚ್ಚಳವನ್ನು ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಿದೆ. ಇದಕ್ಕೆ ಮೀಸಲಾತಿ ಹೆಚ್ಚಳಕ್ಕೆ ನ್ಯಾಯಾಲಯದ ತಡೆ ನೀಡದಂತೆ ರಕ್ಷಣಾತ್ಮಕ ತೀರ್ಮಾನಗಳನ್ನು ಮಾಡಲಾಗಿದೆ ಎಂದರು.
ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಮೀಸಲಾತಿ ಹೆಚ್ಚಳ ಸಂಬಂಧ ಮಸೂದೆ ಮಂಡಿಸಬೇಕೇ, ಇಲ್ಲವೇ ನಿರ್ಣಯ ಕೈಗೊಳ್ಳಬೇಕೇ ಎಂಬುದನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.
ನ್ಯಾ. ನಾಗಮೋಹನ್‌ದಾಸ್ ವರದಿಯ ಅನುಷ್ಠಾನದ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿ ಅದನ್ನು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಲಾಗುವುದು. ಆ ಅಧಿವೇಶನದಲ್ಲೇ ವರದಿ ಬಗ್ಗೆ ಚರ್ಚಿಸಿ ಮೀಸಲಾತಿ ಹೆಚ್ಚಳದ ಬಗ್ಗೆ ತೀರ್ಮಾನ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ನಿರ್ಧರಿಸಿದ್ದೇವೆ ಎಂದರು.
ಪರಿಶಿಷ್ಟ ಜಾತಿ ಪಂಗಡದ ಮೀಸಲಾತಿ ಏರಿಕೆ ಸಂಬಂಧ ಇಂದು ಬೆಳಗ್ಗೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲೂ ಚರ್ಚೆ ನಡೆಸಿ ಮೀಸಲಾತಿ ಏರಿಕೆ ಮಾಡುವಂತೆ ಕೋರ್ ಕಮಿಟಿ ಸರ್ಕಾರಕ್ಕೆ ಆಗ್ರಹಿಸಿತ್ತು. ನಂತರ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲೂ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿ ಏರಿಕೆಗೆ ತಮ್ಮ ಸರ್ಕಾರ ಬದ್ಧವಾಗಿದೆ. ಈ ಸಮುದಾಯದ ಮೀಸಲು ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಹೇಳಿದ್ದರು.
ಡಿಸೆಂಬರ್‌ನಲ್ಲಿ ನಡೆಯುವ ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚೆ ನಡೆಸಿ ನಿರ್ಣಯಗಳನ್ನು ಕೈಗೊಂಡು ಅದನ್ನು ಕೇಂದ್ರಕ್ಕೆ ಕಳುಹಿಸುವ ನಿರ್ಧಾರ ಆಗಿದೆ.ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ನೇತೃತ್ವದಲ್ಲಿ ಅವರ ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಸರ್ವಪಕ್ಷ ನಾಯಕರುಗಳ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರುಗಳು ಪಾಲ್ಗೊಂಡಿದ್ದರು.