ಬೆಂಗಳೂರು: ಕರ್ನಾಟಕ ನೀರಾವರಿ (ತಿದ್ದುಪಡಿ) ಮಸೂದೆ-2024’ನ್ನು ಸೋಮವಾರ ವಿಧಾನಸಭೆಯಲ್ಲಿ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮಂಡಿಸಿದರು. ಈ ನೂತನ ಕಾಯ್ದೆಯಲ್ಲಿ ಇನ್ಮುಂದೆ ಯಾವುದೇ ನಾಲೆಯಿಂದ ಅನಧಿಕೃತವಾಗಿ ನೀರೆತ್ತುವವರ ವಿರುದ್ಧ ವಿಧಿಸಲಾಗುವ ಶಿಕ್ಷೆಯ ಪ್ರಮಾಣವನ್ನು ಹಲವು ಪಟ್ಟು ಹೆಚ್ಚಿಸಿದೆ. ಇದರ ಜತೆಗೆ ನಾಲೆಯ 500 ಮೀಟರ್ ವ್ಯಾಪ್ತಿಯಲ್ಲಿ ಬರುವ ಕೊಳವೆಬಾವಿ ಮತ್ತಿತರ ಎಲ್ಲ ಪ್ರಕಾರದ ಅಂತರ್ಜಲ ಮೂಲಗಳನ್ನು ನಿಗದಿತ ಅವಧಿಯಲ್ಲಿ ನೋಂದಣಿ ಕಡ್ಡಾಯಗೊಳಿಸಲು ಸರಕಾರ ನಿರ್ಧರಿಸಿದೆ.
ನಾಲೆ, ಕೊಳವೆಯನ್ನು ಚುಚ್ಚುವುದು ಅಥವಾ ಕತ್ತರಿಸುವುದು ಸೇರಿಸುವಂತಹ ಕೃತ್ಯಗಳಿಗೆ ಪ್ರಸ್ತುತ 1 ವರ್ಷದ ಕಾರಾಗೃಹ ಶಿಕ್ಷೆ ಅಥವಾ 1,000 ರೂ. ಜುಲ್ಮಾನೆ ಇದೆ. ಇದಕ್ಕೆ ಸಂಬಂಧಿಸಿದ ಇತರ ಉಲ್ಲಂಘನೆಗಳಿಗೆ ಮತ್ತೆ 2 ತಿಂಗಳು ಸೆರೆವಾಸ ವಿಸ್ತರಣೆ ಅಥವಾ 500 ರೂ. ದಂಡ ಇತ್ತು. ಮಸೂದೆ ಅಂಗೀಕಾರಗೊಂಡ ಅನಂತರ 2 ವರ್ಷ ಜೈಲು ಅಥವಾ 2 ಲಕ್ಷ ರೂ. ದಂಡ ವಿಧಿಸಲಾಗು ತ್ತದೆ. ಇತರ ಉಲ್ಲಂಘನೆಗಳಿದ್ದರೆ 50 ಸಾವಿರದಿಂದ 1 ಲಕ್ಷ ರೂ. ವರೆಗೆ ದಂಡ, 1 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.



