ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಮಾ.22 ಏ.05 ವರೆಗೆ ನಡೆಸಲು ಆಯೋಜಿಸಲಾಗಿತ್ತು. ಆದರೆ, ಕೊರೊನಾ ಸೋಂಕಿನ ಕಾರಣ , ಮುಂಜಾಗ್ರತಾ ಕ್ರಮವಾಗಿ ರದ್ದು ಪಡಿಸಿರುವುದಾಗಿ ಜಿಲ್ಲಾಡಳಿತ ತಿಳಿಸಿದೆ.
ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ಧಾರ್ಮಿಕ ದತ್ತಿ ಇಲಾಖೆ, ಜಿಲ್ಲಾಡಳಿತ ಕೋವಿಡ್-19 ಹರಡದಂತೆ ತಡೆಯುವ ಹಿನ್ನೆಲೆ ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯನ್ನು ನಿಷೇಧಿಸಲಾಗಿದೆ.
ಜಾತ್ರಾ ಮಹೋತ್ಸವಕ್ಕೆ ಹೊರಗಡೆಯಿಂದ ಬರುವ ಸಾರ್ವಜನಿಕರು ಹಾಗೂ ಭಕ್ತಾಧಿಗಳು ಭಾಗವಹಿಸುವುದನ್ನು ನಿಷೇಧಿಸಲಾಗಿದೆ ಎಂಬುದಾಗಿ ತಿಳಿಸಿದೆ. ಭಕ್ತಾಧಿಗಳಿಗೆ ಯಾವುದೇ ಅನ್ನ ದಾಸೋಹ(ಪರವು) ಇರುವುದಿಲ್ಲ. ಅಂಗಡಿ ಮುಂಗಟ್ಟುಗಳು, ಜಾತ್ರಾ ಸಾಮಗ್ರಿಗಳು, ವಾಣಿಜ್ಯ ಮಳಿಗೆಗಳನ್ನು ಹಾಕಲು ಅನುಮತಿ ಇರುವುದಿಲ್ಲ. ನಾಯಕನಹಟ್ಟಿಯ ಸುತ್ತಮುತ್ತಲಿನ ಯಾವುದೇ ಸ್ಥಳಗಳಲ್ಲಿ ಟೆಂಟ್ ಇತ್ಯಾದಿ ತಾತ್ಕಾಲಿಕ ವಸತಿಗಳನ್ನು ನಿರ್ಮಿಸಿಕೊಳ್ಳಲು ಅವಕಾಶವಿರುವುದಿಲ್ಲ.
ನಾಯಕನಹಟ್ಟಿ ಸುತ್ತಮುತ್ತಲಿನ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಮದ್ಯಪಾನ, ಮಾರಾಟ, ಸರಬರಾಜು ಹಾಗೂ ಪ್ರಾಣಿ ಬಲಿಯನ್ನು ನಿಷೇಧಿಸಲಾಗಿದೆ.



