ಬೆಂಗಳೂರು: ಟ್ಯಾಕ್ಸಿ ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಟ್ಯಾಕ್ಸಿ ದರ ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಇಂಧನ ಬೆಲೆ ಹೆಚ್ಚಳ ಹಾಗೂ ಇತ್ತೀಚೆಗೆ ಟ್ಯಾಕ್ಸಿ ಚಾಲಕ ಆತ್ಮಹತ್ಯೆ ಹಿನ್ನಲೆ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ. ವಿವಿಧ ಸ್ವರೂಪದ ಟ್ಯಾಕ್ಸಿಗಳ ಪ್ರಯಾಣ ದರ ಏರಿಕೆ ಮಾಡಿದೆ. ಟ್ಯಾಕ್ಸಿ ಪ್ರಯಾಣ ದರ ಏರಿಕೆ ಪ್ರಯಾಣಿಕರಿಗೆ ಹೊರೆಯಾಗಲಿದೆ.
ಟ್ಯಾಕ್ಸಿಗಳನ್ನು ಎ.ಬಿ.ಸಿ ಮತ್ತು ಡಿ ಗಳೆಂದು ವರ್ಗೀಕರಣ ಮಾಡಿ ದರ ಪರಿಷ್ಕರಣೆ ಮಾಡಲಾಗಿದೆ. ಎ-ವರ್ಗ 15 ಲಕ್ಷ ರೂ.ಗಿಂತ ಮೇಲ್ಪಟ್ಟ ವಾಹನಗಳು- ಈ ವಾಹನಗಳಿಗೆ ನಿಗದಿತ ಪ್ರಯಾಣ ದರ 150 ರೂ., ಕನಿಷ್ಠ27 ರೂ., ಗರಿಷ್ಠ 54 ರೂ. ದರ ಪರಿಷ್ಕರಣೆ ಮಾಡಲಾಗಿದೆ. ಬಿ ವರ್ಗ 10 ಲಕ್ಷದಿಂದ 16 ಲಕ್ಷ ರೂ. ವಾಹನಗಳು- ಕನಿಷ್ಠ24 ರೂ. ಗರಿಷ್ಠ48 ರೂ.ಗಳು. ಸಿ ವರ್ಗ ಅಂದರೆ 5 ಲಕ್ಷದಿಂದ 10 ಲಕ್ಷದ ವಾಹನಗಳು- ಕನಿಷ್ಠ21 ರೂ, ಗರಿಷ್ಠ42 ರೂ ನಿಗದಿ ಮಾಡಲಾಗಿದೆ. ಡಿ ವರ್ಗ 5 ಲಕ್ಷದ ವಾಹನಗಳು- ನಿಗದಿತ ದರ 75 ರೂ., ಕನಿಷ್ಠ18 ರೂ., ಗರಿಷ್ಠ36 ರೂ. ದರ ಪರಿಷ್ಕರಣೆ ಮಾಡಲಾಗಿದೆ.
ಜಿಎಸ್ ಟಿ ಹಾಗೂ ಟೋಲ್ ಶುಲ್ಕವನ್ನು ಪ್ರಯಾಣಿಕನಿಂದ ವಸೂಲಿ ಮಾಡಲಾಗುತ್ತದೆ. ಸಮಯದ ಆಧಾರದಲ್ಲಿ ಮಾಡುತ್ತಿದ್ದ ದರ ವಸೂಲಿಗೆ ಬ್ರೇಕ್ ಹಾಕಲಾಗಿದೆ. ಕಿ.ಮೀ ಆಧಾರದಲ್ಲಿ ಅಧಿಸೂಚನೆಯ ದರವನ್ನು ಮಾತ್ರ ಪ್ರಯಾಣಿಕರಿಂದ ವಸೂಲಿ ಮಾಡಬೇಕು. ಕಾಯುವಿಕೆ ದರಗಳನ್ನು 20 ನಿಮಿಷಗಳವರೆಗೆ ಉಚಿತ ಎಂದು ನೀಡಲಾಗಿದೆ. ನಂತರ ಪ್ರತಿ 15 ನಿಮಿಷಗಳಿಗೆ 10 ರೂ ನಿಗದಿ ಮಾಡಲಾಗಿದೆ.



