ವಿಜಯವಾಡ: ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ಸಾರ್ವಜನಿಕ ಕುಂದುಕೊರತೆ ಪರಿಹಾರ ಕಾರ್ಯಕ್ರಮ ‘ಸ್ಪಂದನಾ’ವನ್ನು ಕರ್ನಾಟಕದಲ್ಲೂ ಜಾರಿಗೊಳಿಸಲು ಸರ್ಕಾದ ಮುಂದಾಗಿದೆ.
ಆಂಧ್ರ ಸರ್ಕಾರದ ಸ್ಪಂದನಾ ಕಾರ್ಯಕ್ರಮದಿಂದ ಪ್ರೇರಿತವಾಗಿರುವ ರಾಜ್ಯ ಸರ್ಕಾರ, ರಾಜ್ಯದ ಯೋಜನೆಯ ನಿರ್ದೇಶಕ, ಇ-ಗವರ್ನನ್ಸ್ ಯುನಿಟ್, ಪ್ರೋಗ್ರಾಂ ಮ್ಯಾನೇಜರ್, ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಮತ್ತು ಇತರರು ಸೋಮವಾರ ಆಂಧ್ರ ಪ್ರದೇಶ ಸೆಕ್ರೆಟರಿಯೇಟ್ನ ಆರ್ಟಿಜಿಎಸ್ನಲ್ಲಿರುವ ಕೇಂದ್ರ ಸ್ಪಂದನಾ ಮಾನಿಟರಿಂಗ್ ಘಟಕಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ರಾಜ್ಯದಲ್ಲೂ ಸಾರ್ವಜನಿಕ ಕುಂದುಕೊರತೆ ಪರಿಹಾರಕ್ಕೆ ಸ್ಪಂದನಾ ಮಾದರಿಯ ಯೋಜನೆ ಜಾರಿಗೆ ತರಬೇಕು ಎಂಬ ಉದ್ದೇಶದಿಂದ ಕರ್ನಾಟಕ ತಂಡ ಆಂಧ್ರಕ್ಕೆ ಭೇಟಿ ನೀಡಿದ್ದು, ಆಂಧ್ರ ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ ಡಾ.ಎಂ.ಹರಿಕೃಷ್ಣ ಮತ್ತು ಆರ್ಟಿಜಿಎಸ್ ಸಿಇಒ ವಿದ್ಯಾ ಸಾಗರ್ ಅವರು ಸ್ಪಂದನಾ ಯೋಜನೆ ಮತ್ತು ಅದರ ತಾಂತ್ರಿಕತೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಸ್ಪಂದನಾ ಯೋಜನೆ ಕರ್ನಾಟಕ ತಂಡಕ್ಕೆ ಸ್ಫೂರ್ತಿ ನೀಡಿದೆ ಮತ್ತು ಮುಖ್ಯಮಂತ್ರಿಗಳು ಈ ಕಾರ್ಯಕ್ರಮವನ್ನು ವೈಯಕ್ತಿಕವಾಗಿ ಹೇಗೆ ಮೇಲ್ವಿಚಾರಣೆ ಮಾಡುತ್ತಾರೆ ಎಂಬುದನ್ನು ತಿಳಿದುಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



