ಉಡುಪಿ: ಕೋವಿಡ್ ಕಾರಣದಿಂದ ಸ್ಥಗಿತವಾಗಿದ್ದ ಸಪ್ತಪದಿ ಸಾಮೂಹಿಕ ವಿವಾಹ ಯೋಜನೆ ಇನ್ಮುಂದೆ ಪ್ರತಿ ತಿಂಗಳು ನಡೆಯಲಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಜನವರಿಯಲ್ಲಿ ವಿವಾಹಕ್ಕೆ ಎರಡು ದಿನಾಂಕ ನಿಗದಿ ಪಡಿಸಲಾಗಿದೆ. ಇನ್ಮುಂದೆ ವಾರ್ಷಿಕದ ಬದಲು ಪ್ರತಿ ತಿಂಗಳು ಸಪ್ತಪದಿ ಕಾರ್ಯಕ್ರಮ ನಡೆಸಲು ಸರ್ಕಾರ ಚಿಂತಿಸಿದೆ ಎಂದು ತಿಳಿಸಿದರು.
ಲವ್ ಜಿಹಾದ್ ನಿಯಂತ್ರಣಕ್ಕೆ ಕಾಯಿದೆ ತರಲು ರಾಜ್ಯ ಸರಕಾರ ಹಾಗೂ ಪಕ್ಷ ಈಗಾಗಲೇ ನಿರ್ಧಾರ ಮಾಡಿದೆ. ಸುಗ್ರಿವಾಜ್ಞೆ ಮೂಲಕ ಜಾರಿಗೆ ತರುತ್ತಿಲ್ಲ. ಆ ಕಾಯಿದೆ ಮೂಲಕವೇ ತರಬೇಕು ಎಂಬುದು ನಮ್ಮ ಪಕ್ಷ, ಸಾರ್ವಜಕರ ಆಶಯ ವಾಗಿದೆ ಎಂದು ಅವರು ತಿಳಿಸಿದರು.
ವಿಧಾನ ಪರಿಷತ್ ಸಭಾಪತಿ ಸ್ಥಾನದ ಬಗ್ಗೆ ಎಲ್ಲರಿಗೂ ಗೌರವ ಇದೆ. ಆದರೆ ಕಾಂಗ್ರೆಸಿನವರು ಅದನ್ನು ಕಾಂಗ್ರೆಸಿಕರಣಗೊಳಿಸಿ ರಾಜಕಾರಣ ಮಾಡಿರುವುದ ರಿಂದ ಇಂದು ಎಲ್ಲ ರೀತಿಯ ಗೊಂದಲಗಳು ಸೃಷ್ಠಿಯಾಗಿವೆ. ಇದಕ್ಕೆ ನೇರವಾಗಿ ಕಾಂಗ್ರೆಸ್ ಪಕ್ಷವೇ ಕಾರಣವಾಗಿದೆ. ಕಾಂಗ್ರೆಸ್‌ನವರು ಸಭಾಪತಿ ಮೇಲೆ ಒತ್ತಡ ತಂದು ಈ ಗೊಂದಲಕ್ಕೆ ಉಂಟು ಮಾಡಿದ್ದಾರೆ. ರಾಜಧರ್ಮವನ್ನು ಪಾಲಿಸ ಬೇಕಾದ ಕಾಂಗ್ರೆಸ್, ಸಭಾಪತಿ ಅವರ ಕೈಯನ್ನು ಕಟ್ಟಿ ಹಾಕಿ, ಅವಿಶ್ವನಾಸ ಗೊತ್ತುವಳಿ ಆಗದಂತೆ ನೋಡಿಕೊಂಡಿದೆ ಎಂದ ಅವರು, ಸಭಾಪತಿ ಯಾರು ಆಗಬೇಕು ಎಂಬುದನ್ನು ಬಿಜೆಪಿ ಪಕ್ಷ ತೀರ್ಮಾನ ಮಾಡುತ್ತದೆ. ಜೆಡಿಎಸ್ ಬೆಂಬಲ ನೀಡಿದರೂ ಕೂಡ ಎಲ್ಲವೂ ಪಕ್ಷದ ಅಧ್ಯಕ್ಷರು, ವರಿಷ್ಠರು, ಮುಖ್ಯ ಮಂತ್ರಿಗಳು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.