ಬೆಂಗಳೂರು: ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ದಾಖಲಾಗಿರುವ ರೈತರ ಭೂಮಿ ವ್ಯಾಜ್ಯಗಳನ್ನು 3 ತಿಂಗಳಲ್ಲಿ ಇತ್ಯರ್ಥಪಡಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದರು.
- ಯಾವುದೇ ಪ್ರಕರಣ 3 ತಿಂಗಳು ಮೀರದ ಹಾಗೆ ವಿಲೇ ಮಾಡಲು ಸೂಚನೆ
- ರೈತರಿಗೆ ಆಗುತ್ತಿರುವ ಸಮಸ್ಯೆ ಪರಿಹರಿಸಲು ದುರಸ್ಥು ಪೋಡಿ ಅಭಿಯಾನ
- ಡಿ.15ರೊಳಗೆ 5 ಸಾವಿರ ಬಗರ್ ಹುಕುಂ ರೈತರ ಅರ್ಜಿಗಳನ್ನು ಸಮಿತಿಗಳಿಗೆ ಸಲ್ಲಿಕೆ
ರಾಜ್ಯದಲ್ಲಿ ಬಗರ್ ಹಕುಂ ಅರ್ಜಿ, ಪೋಡಿ ಮತ್ತು ಕಂದಾಯ ನ್ಯಾಯಾಲಯದಲ್ಲಿರುವ ಪ್ರಕರಣಗಳ ಪ್ರಗತಿಗೆ ಒತ್ತು ನೀಡುವ ಸಂಬಂಧ ಎಲ್ಲ ತಾಲೂಕುಗಳ ತಹಶೀಲ್ದಾರ್‌ಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಭೂಮಿ ವ್ಯಾಜ್ಯಗಳನ್ನು 3 ತಿಂಗಳಲ್ಲಿ ಇತ್ಯರ್ಥಪಡಿಸಬೇಕು ಸೂಚಿಸಿದ್ದರೂ, ವ್ಯಾಜ್ಯ ವಿಲೇಗೆ ವರ್ಷಗಳನ್ನು ತೆಗೆದುಕೊಳ್ಳುವುದು ವಾಡಿಕೆಯಾಗಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ರೀತಿಯ ವಿಳಂಬದಿಂದಾಗಿ ರೈತರು ಅನಾವಶ್ಯಕವಾಗಿ ಸರಕಾರಿ ಕಚೇರಿಗಳಿಗೆ ಸುತ್ತುವ ಪರಿಸ್ಥಿತಿ ನಿರ್ಮಾಣ ಮಾಡಿದೆ. ನಮ್ಮ ಸರಕಾರ ಇವುಗಳನ್ನು ಆಂದೋಲನ ಮಾದರಿಯಲ್ಲಿ ವಿಲೇ ಕೈಗೊಂಡು, ಪ್ರಕರಣಗಳನ್ನು ವಿಲೇ ಮಾಡಿ ಹಾಲಿ 3 ತಿಂಗಳು ಮೀರಿದ 692 ಪ್ರಕರಣಗಳು ಮಾತ್ರ ಬಾಕಿ ಉಳಿದಿವೆ. ಈ ಪ್ರಕರಣಗಳನ್ನು ಡಿಸೆಂಬರ್ ನಲ್ಲಿ ವಿಲೇ ಮಾಡಿ, ಯಾವುದೇ ಪ್ರಕರಣ 3 ತಿಂಗಳಿಗೆ ಮೀರದ ಹಾಗೆ ವಿಲೇ ಮಾಡಲು ಸೂಚನೆ ನೀಡಿದರು.
ರಾಜ್ಯದಲ್ಲಿ 30 ವರ್ಷಗಳಿಂದ ಹೆಚ್ಚು ಅವಧಿಗಳಿಂದ ಮಂಜೂರಾಗಿರುವ ಸರಕಾರಿ ಜಮೀನುಗಳು ಪೋಡಿಯಾಗದೆ ಲಕ್ಷಾಂತರ ರೈತರಿಗೆ ಆಗುತ್ತಿರುವ ಸಮಸ್ಯೆ ಪರಿಹರಿಸಲು ದುರಸ್ಥು ಪೋಡಿ ಅಭಿಯಾನ ಆರಂಭಿಸಿದ್ದು, 29,778 ಸರ್ವೆ ನಂಬರ್‌ಗಳಿಗೆ 1-5 ಕಡತ ತಯಾರಿಸಲಾಗಿದೆ. ಇವುಗಳಲ್ಲಿ 11,436 ರೈತರ ಜಮೀನುಗಳನ್ನು ಸರ್ವೆ ಮಾಡಲು ಆದೇಶಿಸಲಾಗಿದೆ ಎಂದು ಅವರು ಹೇಳಿದರು.
ಡಿಸೆಂಬರ್ ಅಂತ್ಯದಲ್ಲಿ 50 ಸಾವಿರ ರೈತರ ಜಮೀನುಗಳನ್ನು ಸರ್ವೆಗೆ ಆದೇಶಿಸಲು ಸೂಚನೆ ನೀಡಲಾಗಿದೆ. ಇದರಿಂದ ದಶಕಗಳಿಂದ ಬಾಕಿಯಿದ್ದ ರೈತರ ದುರಸ್ಥು ಸಮಸ್ಯೆಯನ್ನು ಬಗೆಹರಿಸಲು ಈಗ ನಿರ್ಣಾಯಕ ಕ್ರಮಕೈಗೊಳ್ಳಲಾಗುತ್ತಿದೆ.
ಬಗರ್ ಹುಕುಂನಲ್ಲಿ ಈಗಾಗಲೇ ಒಂದು ಸಾವಿರ ರೈತರ ಅರ್ಜಿಗಳನ್ನು ಶಾಸಕರ ನೇತೃತ್ವದ ಸಮಿತಿಗಳಿಗೆ ಮಂಡಿಸಲಾಗಿದ್ದು, ಡಿ.15ರೊಳಗೆ 5 ಸಾವಿರ ರೈತರ ಅರ್ಜಿಗಳನ್ನು ಸಮಿತಿಗಳಿಗೆ ಮಂಡಿಸಲು ಸೂಚಿಸಲಾಗಿದೆ. ಮುಂದುವರೆದು, ಫೆಬ್ರವರಿ ಅಂತ್ಯದೊಳಗೆ ಎಲ್ಲ ಅರ್ಹ ಅರ್ಜಿಗಳನ್ನು ಸಮಿತಿಗೆಳಿಗೆ ಮಂಡಿಸಲು ಅವರು ಸೂಚಿಸಿದರು.



