ಬೆಳಗಾವಿ: ಕಂದಾಯ ಇಲಾಖೆಯ ಪೋಡಿ ಮುಕ್ತ ಗ್ರಾಮ ಯೋಜನೆಯಡಿ ಬಾಕಿ ಪ್ರಕರಣಗಳನ್ನು ಆರು ತಿಂಗಳಲ್ಲಿ ಇತ್ಯರ್ಥಗೊಳಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಬುಧವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ರಾಮೋಜಿ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬಹು ಮಾಲಕತ್ವದ ಖಾಸಗಿ ಒಡೆತನದ ಪಹಣಿಗಳನ್ನು ಏಕವ್ಯಕ್ತಿ ಪಹಣಿಗಳನ್ನಾಗಿ ಮಾಡುವ ಉದ್ದೇಶದ ಪೋಡಿ ಮುಕ್ತ ಯೋಜನೆಯಡಿ ರಾಜ್ಯದಲ್ಲಿ ಈಗಾಗಲೇ 16,644 ಗ್ರಾಮಗಳನ್ನು ಪೋಡಿ ಮುಕ್ತ ಗ್ರಾಮಗಳಾಗಿ ಮಾಡಲಾಗಿದೆ.
ರಾಜ್ಯದಲ್ಲಿ ಭೂ ಮಾಪನ ಇಲಾಖೆಯಲ್ಲಿ 3 ವರ್ಷಗಳಲ್ಲಿ ವಿವಿಧ ರೀತಿಯ 6,62,825 ಪೋಡಿ ಅರ್ಜಿಗಳನ್ನು ಸ್ವೀಕರಿಸಿದ್ದು, ಅದರಲ್ಲಿ 5,33,545 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಬಾಕಿ ಇರುವ 1,29,280 ಅರ್ಜಿಗಳನ್ನು ಆರು ತಿಂಗಳಲ್ಲಿ ಇತ್ಯರ್ಥಗೊಳಿಸಲಾಗುವುದು. ಪ್ರಕರಣಗಳಲ್ಲಿನ ನ್ಯೂನತೆಗಳನ್ನು ಶೀಘ್ರವಾಗಿ ಸರಿಪಡಿಸಿಕೊಂಡು ವಿಳಂಬವಿಲ್ಲದೆ ಪೋಡಿ ದುರಸ್ತಿ ಮಾಡಲಾಗುತ್ತಿದೆ ಎಂದರು.
ಒಂದು ತಂಗಳಲ್ಲಿ ಮ್ಯುಟೇಷನ್ , ಪೋಡಿ: ಈ ಹಿಂದೆ, ಮ್ಯುಟೇಷನ್ ಪೋಡಿ ಪ್ರಕ್ರಿಯೆಯನ್ನು ಪೂರೈಸಲು ನಾಲ್ಕರಿಂದ ಆರು ತಿಂಗಳವರೆಗೆ ಕಾಲಾವಕಾಶ ತೆಗೆದುಕೊಳ್ಳಲಾಗುತ್ತಿತ್ತು. ಈಗ ಚುರುಕುಗೊಳಿಸಿದ್ದು, ಒಂದು ತಿಂಗಳ ಅವಧಿಯಲ್ಲಿ ಕೆಲಸಗಳು ಆಗುತ್ತವೆ ಎಂದು ತಿಳಿಸಿದರು.



