ಬೆಂಗಳೂರು: ಭೂ ದಾಖಲೆ ಡಿಜಿಟಲೀಕರಣದ ಭೂ ಸುರಕ್ಷಾ ಯೋಜನೆ ರಾಜ್ಯದ 31 ತಾಲೂಕುಗಳಲ್ಲಿ ಯಶಸ್ಸು ಕಂಡಿರುವ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದೆ. 2ನೇ ಹಂತದಲ್ಲಿ 209 ತಾಲೂಕುಗಳಲ್ಲಿ ಗಣಕೀಕರಣ ನಡೆಸುವ ಉದ್ದೇಶ ಹೊಂದಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಗುಡಿಬಂಡೆಯಲ್ಲಿ ಬುಧವಾರ ಚಾಲನೆ ಬಳಿಕ ಮಾತನಾಡಿದತು. ಪ್ರಾಯೋಗಿಕವಾಗಿ 31 ತಾಲೂಕುಗಳಲ್ಲಿ ಯಶಸ್ಸು ಕಂಡಿರುವ ಹಿನ್ನೆಲೆಯಲ್ಲಿ 2ನೇ ಹಂತದ ಭೂ ದಾಖಲೆಗಳ ಗಣಕೀಕರಣಕ್ಕೆ ಚಾಲನೆ ಸಿಕ್ಕಿದೆ. ರಾಜ್ಯದ ಉಳಿದ 209 ಕಚೇರಿಗಳಲ್ಲಿ ಗಣಕೀಕರಣಕ್ಕೆ ತಲಾ 6 ಡೆಸ್ಕ್ ಟಾಪ್ ಕಂಪ್ಯೂಟರ್, 3 ಸ್ಕಾೃನರ್, 6 ಡೇಟಾ ಎಂಟ್ರಿ ಅಪರೇಟರ್‌ಗಳನ್ನು ಒದಗಿಸಲಾಗಿದೆ.
ಕಾರಟಗಿ, ಚಿಂಚೋಳಿ, ಯಳಂದೂರು, ಕುರುಗೋಡು, ಯಾದಗಿರಿ, ಹೆಬ್ರಿ ಮತ್ತು ಮೊಳಕಾಲ್ಮುರು ತಾಲೂಕು ಕಚೇರಿಗಳಲ್ಲಿ ಎ ಮತ್ತು ಬಿ ದಾಖಲೆಗಳ ಗಣಕೀಕರಣ ಪೂರ್ಣಗೊಂಡಿದೆ. ಭೂ ದಾಖಲೆಗಳ ಗಣಕೀಕರಣ ಕಾರ್ಯಕ್ಕೆ ಡಿಐಎಲ್‌ಆರ್‌ಎಂಪಿ ಯೋಜನೆಯಡಿ ಕೇಂದ್ರ ಸರ್ಕಾರದ ಅನುದಾನ ಮತ್ತು ರಾಜ್ಯ ಸರ್ಕಾರವು ಒದಗಿಸುವ ಅನುದಾನದಿಂದ ಭೂ ಸುರಕ್ಷಾ ಯೋಜನೆಯನ್ನು ರಾಜ್ಯಾದ್ಯಂತ ನಿರ್ವಹಿಸಲಾಗುತ್ತಿದೆ.
ಈ ಯೋಜನೆಯಡಿ ತಾಲೂಕು ಕಚೇರಿಯ ಅತ್ಯಂತ ಪ್ರಮುಖವಾದ ಹಳೆಯ ಮತ್ತು ಸ್ವಾತಂತ್ರ್ಯಪೂರ್ವದ ಅವಧಿಯ ಭೂ ದಾಖಲೆಗಳನ್ನು ಇಂಡೆಕ್ಸಿಂಗ್, ಕ್ಯಾಟಲಾಗಿಂಗ್, ಸ್ಕಾೃನಿಂಗ್ ಮತ್ತು ಅಪ್ ಲೋಡಿಂಗ್ ಮಾಡಿ ಗಣಕೀಕರಣಗೊಳಿಸಲಾಗುತ್ತಿದೆ.



