ಬೆಂಗಳೂರು: ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಯ ಬಗ್ಗೆ ಆರು ತಿಂಗಳಲ್ಲಿ ವರದಿ ಪಡೆಯುವ ಬಗ್ಗೆ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದು, ಹೀಗಾಗಿ ತಾತ್ಕಾಲಿಕವಾಗಿ ಧರಣಿ ಹಿಂಪಡೆಯಲು ಜಯ ಮೃತ್ಯುಂಜಯ ಸ್ವಾಮೀಜಿ ನಿರ್ಧರಿಸಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಸದನದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭರವಸೆ ನೀಡಿದ ಬಳಿಕ ಸಚಿವ ಸಿ.ಸಿ. ಪಾಟೀಲ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸ್ವಾಮೀಜಿಯವರಿಗೆ ಧರಣಿ ಹಿಂಪಡೆಯಲು ಮನವಿ ಮಾಡಿಕೊಂಡರು.
ಸಮಗ್ರ ಮೀಸಲಾತಿ ನೀಡುವಂತೆ ಸಿಎಂ ಗೆ ಮನವಿ ಮಾಡಿದ್ದೆವು. ಎಲ್ಲಾ ಉಪಜಾತಿಗಳನ್ನೂ ಮೀಸಲಾತಿಗೆ ಸೇರಿಸುವಂತೆ ಮನವಿ ಮಾಡಿದ್ದೇವೆ. ಈಗ ಆರು ತಿಂಗಳ ಒಳಗಾಗಿ ವರದಿ ಸಿದ್ದಪಡಿಸುವಂತೆ ಸೂಚಿಸಲಾಗಿದೆ. ಆರು ತಿಂಗಳಲ್ಲಿ ಸ್ಪಷ್ಟನೆ ದೊರೆಯಲಿದೆ. ಹೀಗಾಗಿ ಸಿಎಂಗೆ ಅಭಿನಂದನೆ ಸಲ್ಲಿಸಿದ್ದೇನೆ ಎಂದರು.
ಸದ್ಯ ನಾನು ಮೀಸಲಾತಿ ಹೋರಾಟಕ್ಕೆ ಮಾತ್ರ ಸ್ಥಗಿತ ಮಾಡಿದ್ದೇನೆ. ಆದರೆ, ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ನಿರಂತರ. ಭ್ರಷ್ಟಾಚರಷಾಹಿಗಳ ವಿರುದ್ಧ ಹೋರಾಟ ಮುಂದುವರೆಯುತ್ತದೆ. ನಾನು ಯಡಿಯೂರಪ್ಪ, ವಿಜಯೇಂದ್ರನ ಏಜೆಂಟ್ ಅಲ್ಲ, ವಿಜಯೇಂದ್ರನ ಪರವಾಗಿ ನಿಲ್ಲಲು ನನಗೆ ಹುಚ್ಚು ಹಿಡಿದಿಲ್ಲ, ನಾನು ಬಿಜೆಪಿ ಹಾಗೂ ಮೋದಿಯ ನಿಷ್ಟಾವಂತ ಬೆಂಬಲಿಗ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ.
ಸಿಎಂ ಮೇಲೆ ವಿಶ್ವಾಸ ಇಡಬೇಕಾಗುತ್ತದೆ. ಸದನದಲ್ಲೇ ಅವರು ಸ್ವಯಂ ಪ್ರೇರಿತವಾಗಿ ಹೇಳಿಕೆ ಕೊಟ್ಟಿದ್ದಾರೆ. ಸುಭಾಷ್ ಆಡಿ ಸಮಿತಿ ಕಾನೂನಾತ್ಮಕ ವರದಿಯಾಗಿಲ್ಲ. ಹಿಂದುಳಿದ ಆಯೋಗದ ಶಿಫಾರಸ್ಸು ಕೊಟ್ಟಿದ್ದಾರೆ ಎಂದರು.



