ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ರಾಜ್ಯಾದ್ಯಂತ ಫೆಬ್ರವರಿ 23ರವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ವಾಯುಭಾರ ಕುಸಿತದಿಂದಾಗಿ ಬೆಂಗಳೂರು ಸೇರಿ ಹಲವೆಡೆ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗಿದೆ
ಕೊಡಗು ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ಶನಿವಾರಸಂತೆ ಸುತ್ತಮುತ್ತ ಆಲಿಕಲ್ಲು ಮಳೆ ಸುರಿದಿದ್ದು, ಕಾಫಿ, ಹಸಿ ಮೆಣಸಿನ ಫಲಸು ಆಲಿಕಲ್ಲು ಹೊಡೆತಕ್ಕೆ ಸಂಪೂರ್ಣವಾಗಿ ನಾಶವಾಗಿದೆ.
ರಾಜ್ಯದ ಉತ್ತರ ಒಳನಾಡಿನಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ತುಮಕೂರು, ಮಲೆನಾಡು, ಕೊಡಗಿನಲ್ಲಿ ನಾಳೆಯವರೆಗೆ (ಫೆ. 23) ಮಳೆಯಾಗುವ ಸಾಧ್ಯತೆಯಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಕೇರಳದಿಂದ ಮಹಾರಾಷ್ಟ್ರದ ಕೆಲವೆಡೆ ಭಾಗಶಃ ಮೋಡ ಕವಿದ ವಾತಾವರಣ ಕಂಡು ಬಂದಿದ್ದು, ಶನಿವಾರ ತುಮಕೂರು, ಉತ್ತರ ಕನ್ನಡ,ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಭದ್ರಾವತಿ, ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಮಳೆಯಾಗಿದೆ.
ಭಾನುವಾರ ಬೆಳಗ್ಗೆಯಿಂದಲೇ ಮೋಡಕವಿದ ವಾತಾವರಣ ಸೃಷ್ಟಿಯಾಗಿದ್ದು, ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಹಳಿಯಾಳ, ಶಿರಸಿ ಮಹಾರಾಷ್ಟ್ರದ ಗಡಿಭಾಗದ ರಾಜ್ಯದ ಜಿಲ್ಲೆಗಳಾದ, ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಾಪುರ ಸೇರಿದಂತೆ ರಾಜ್ಯಾದ್ಯಂತ ಕೆಲವೆಡೆ ಗುಡುಗು ಮಿಂಚಿನಿಂದ ಕೂಡಿದ ಭಾರಿ ಮಳೆಯಾಗುವ ಸಂಭವ ಇದೇ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ
ದಕ್ಷಿಣ ಕನ್ನಡ,ಉತ್ತರ ಕನ್ನಡ, ಉಡುಪಿ, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ,ಹಾವೇರಿ,ಕಲಬುರಗಿ,ಕೊಪ್ಪಳ,ರಾಯಚೂರು,ವಿಜಯಪುರ, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ,ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು,ಹಾಸನ, ಕೋಲಾರ,ಮಂಡ್ಯ,ರಾಮನಗರ, ಮೈಸೂರು,ಶಿವಮೊಗ್ಗ,ತುಮಕೂರಿನಲ್ಲಿ ಮಳೆಯಾಗಲಿದೆ
ರಾಜ್ಯದಲ್ಲಿ 27 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ,17 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಇನ್ನು ದಾವರಣಗೆರೆ ಹಾಗೂ ಬೀದರ್‌ನಲ್ಲಿ ಅತಿ ಕನಿಷ್ಠ ಉಷ್ಣಾಂಶ ಅಂದರೆ 12.0 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.



