ಬೆಂಗಳೂರು: ಮುಂದಿನ 10 ದಿನ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಎಂಡಿಸಿ) ಮುನ್ಸೂಚನೆ ನೀಡಿದೆ.
ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಲಿದೆ. 64.5 ಮಿ. ಮೀ. ನಿಂದ 115 ಮಿ. ಮೀ. ತನಕ ಮಳೆಯಾಗಲಿದೆ ಎಂದು ಕೆಎಸ್‌ಎನ್‌ಎಂಡಿಸಿ ಪ್ರಕಟಣೆ ತಿಳಿಸಿದೆ. ಈ ಕುರಿತು ಪಿಟಿಐ ವರದಿ ಮಾಡಿದೆ. 224 ಮಿ. ಮೀ. ವರೆಗೆ ಮಳೆ ಸಾಧ್ಯತೆ ಇದೆ.
ಮುಂದಿನ 10 ದಿನ ಕರಾವಳಿ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಲಿದೆ. ಜುಲೈ 2 ರ ತನಕ ಗಂಟೆಗೆ 45 ರಿಂದ 55 ಕಿ. ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಕರಾವಳಿ ತೀರದಲ್ಲಿ ಜನರು ಎಚ್ಚರಿಕೆಯಿಂದ ಇರಬೇಕು. ಸಮುದ್ರದಲ್ಲಿ 3 ರಿಂದ 3.2 ಮೀಟರ್ ವ್ಯಾಪ್ತಿಯಲ್ಲಿ ಹೆಚ್ಚಿನ ಅಲೆಗಳು ಏಳುವ ನಿರೀಕ್ಷೆ ಇದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಜುಲೈ 2ರ ತನಕ ಸಾಧಾರಣ ಮಳೆಯ ಮುನ್ಸೂಚನೆ ಇದೆ.
ಜುಲೈನಲ್ಲಿ ಮುಂಗಾರು ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಹೇಳಿದೆ. ಮಳೆ ಕೊರತೆ ಉಂಟಾಗುವುದಿಲ್ಲ ವಾಡಿಕೆಯಷ್ಟು ಮಳೆಯಾಗಲಿದೆ ಎಂದು ತಿಳಿಸಿದೆ. ಆದರೆ ಜುಲೈ 2ರ ಬಳಿಕ ಮುಂಗಾರು ಮಾರುತಗಳು ಪ್ರಬಲವಾಗಲಿದೆ.
ಕೆಲವು ದಿನಗಳಿಂದ ಮಳೆ ಜೂನ್ ಆರಂಭದಲ್ಲಿ ಮುಂಗಾರು ಆಗಮನ ವಿಳಂಬವಾಯಿತು. ಬಳಿಕ ಬಿಪರ್‌ಜಾಯ್ ಚಂಡಮಾರುತದ ಪರಿಣಾಮ ಮುಂಗಾರು ಮಳೆ ನಿರೀಕ್ಷಿತವಾಗಿ ಸುರಿಯಲಿಲ್ಲ. ಮತ್ತೊಂದು ಕಡೆ ಚಂಡಮಾರುತ ಸಹ ರಾಜ್ಯಕ್ಕೆ ಮಳೆ ತರಲಿಲ್ಲ. ಕರಾವಳಿ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಸಾಧಾರಣೆ ಮಳೆಯಾಗುತ್ತಿದೆ.