ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯಲ್ಲಿ ಕೆಲವಡೆ ಮುಂಗಾರು ಪೂರ್ವ ಮಳೆ (Rain) ಅಬ್ಬರಿಸುತ್ತಿದೆ. ಇದರ ನಡುವೆಯೇ ಈ ಬಾರಿ ಮುಂಗಾರು ಮಳೆ ಬಗ್ಗೆ ಹವಾಮಾನ ಇಲಾಖೆ ಸಿಹಿ ನೀಡಿದೆ. ಈ ಸಲದ ನೈರುತ್ಯ ಮುಂಗಾರಿನ (Monsoon Season) ಜೂನ್ – ಸೆಪ್ಟೆಂಬರ್ 2025ರ ದೀರ್ಘ ಶ್ರೇಣಿಯಲ್ಲಿ ಅಧಿಕ ಮಳೆ ಮುನ್ಸೂಚನೆ ನೀಡಲಾಗಿದೆ.
ರಾಜ್ಯದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳ ನಾಡಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕ ಸೇರಿ ದೇಶದಲ್ಲಿ ಜೂನ್- ಸೆಪ್ಟೆಂಬರ್ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಲಿದೆ. ದೀರ್ಘಾವಧಿಯ ಸರಾಸರಿ ಮಳೆಯ ಪ್ರಮಾಣ 87 ಸೆಂ.ಮೀ. ಇದ್ದು, ಈ ಬಾರಿ ಶೇ. 105ರಷ್ಟು ಮಳೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದೆ.