ಬೆಂಗಳೂರು: ಅಂಡಮಾನ್ ಮತ್ತು ನಿಕೋಬಾರ್ ಭಾಗದಲ್ಲಿ ಅಪ್ಪಳಿಸಲಿರುವ ‘ಆಸನಿ’ ಚಂಡಮಾರುತ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಾ. 24ರವರೆಗೆ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳ ಕೊಲ್ಲಿಯಲ್ಲಿ ಸಂಭವಿಸಿರುವ ಪ್ರಬಲ ವಾಯುಭಾರ ಕುಸಿತ ಇಂದು (ಮಾ.21) ಸಂಜೆ ವೇಳೆ ಮತ್ತಷ್ಟು ತೀವ್ರಗೊಂಡು ಚಂಡಮಾರುತವಾಗಿ ಕೆಲವೆಡೆ ಗುಡುಗು, ಸಿಡಿಲು ಸಹಿತ ಮಳೆಯಾಗಬಹುದು. ಆಗ್ನೇಯ ಬಂಗಾಳಕೊಲ್ಲಿ ಹಾಗೂ ದಕ್ಷಿಣ ಅಂಡಮಾನ್ ಪ್ರದೇಶದಲ್ಲಿ ವಾಯುಭಾರ ಕುಸಿತ ಪ್ರಬಲಗೊಂಡಿದೆ. ಮುಂದಿನ 24 ಗಂಟೆಗಳಲ್ಲಿ ಇದರ ತೀವ್ರತೆ ಹೆಚ್ಚಾಗಲಿದೆ.
ಮತ್ತೊಂದೆಡೆ ಮಧ್ಯಪ್ರದೇಶದಿಂದ ರಾಜ್ಯದ ಉತ್ತರ ಒಳನಾಡಿನವರೆಗೆ ಮೇಲ್ಮೈ ಸುಳಿಗಾಳಿ ವ್ಯಾಪಿಸಿದೆ. ಇವುಗಳ ಪರಿಣಾಮ ರಾಜ್ಯದಲ್ಲಿ ಎರಡು ದಿನಗಳಿಂದ ಮಳೆಯಾಗುತ್ತಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳ ಹಲವೆಡೆ ಮುಂದಿನ ಐದು ದಿನಗಳವರೆಗೆ ಮಳೆಯಾಗುವ ಮುನ್ಸೂಚನೆ ಇದೆ ಎಂದರು.
ರಾಯಚೂರಿನಲ್ಲಿ 40 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಹಾಗೂ ದಾವಣಗೆರೆಯಲ್ಲಿ 16 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.



