ಬೆಂಗಳೂರು; ಬೆಳ್ಳಂಬೆಳಗ್ಗೆ ಬೆಂಗಳೂರು, ತುಮಕೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಪ್ರದೇಶದಲ್ಲಿ ಮಳೆ ಸುರಿದಿದೆ. ಬೆಳಗ್ಗೆಯಿಂದ ಜಿಟಿಜಿಟಿ ಮಳೆಯಾಗಿದ್ದು, ಇನ್ನೂ ಕೆಲವು ಕಡೆ ದಟ್ಟ ಮೋಡ ಕವಿದ ವಾತಾವರಣವಿತ್ತು. ಈ ಮಳೆ ಇನ್ನೂ ಮೂರ್ನಾಲ್ಕು ದಿನಗಳವರೆಗೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜಧಾನಿ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳು, ಕರಾವಳಿ ಕೆಲವಡೆ ಸೋಮವಾರವೂ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ನೈಋತ್ಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಎದ್ದಿದೆ. ಪರಿಣಾಮ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆ ಆಗುತ್ತಿದೆ.
ಸೋಮವಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಹಾಗೂ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಒಂದೆರಡು ಸ್ಥಳದಲ್ಲಿ ತುಂತುರು ಮಳೆ ಯಾಗುವ ಸಾಧ್ಯತೆ ಇದೆ.
ತಮಿಳುನಾಡು ಮತ್ತು ಕೇರಳ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಭಾಗಗಳಲ್ಲಿ ಭರ್ಜರಿ ಮಳೆ ಬೀಳುವ ಎಚ್ಚರಿಕೆ ನೀಡಿದೆ. ಕರ್ನಾಟಕದ ಮಲೆನಾಡು ಭಾಗದಲ್ಲೂ ಮಳೆಯ ವಾತಾವರಣ ಇರಲಿದೆ. ಚಂಡಮಾರುತ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಮುಂದಿನ ಐದು ದಿನಗಳ ಕಾಲ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.



