ಬೆಂಗಳೂರು: ಇಡೀ ವರ್ಷ ಪೂರ್ತಿ ಮಳೆ ಅಬ್ಬರದ ನಡುವೆ ಅಷ್ಟೋ, ಇಷ್ಟೋ ಬೆಳೆದ ರೈತರ ಬೆಳೆ ಕೊಯ್ಲಿಗೂ ಮಳೆ ಬಿಡುತ್ತಿಲ್ಲ. ಅದರಲ್ಲೂ ರಾಗಿ, ಭತ್ತದ ಕೊಯ್ಲಿಗೆ ಜಿಟಿಜಿಟಿ ಮಳೆ ಕಾಟ ಶುರುವಾಗಿದೆ. ಒಂದು ವಾರ ಫೆಂಗಲ್ ಚಂಡಮಾರುತದ ಪರಿಣಾಮದಿಂದ ಎಲ್ಲಡೆ ಮಳೆ ಅಬ್ಬರಿಸಿತ್ತು. ಇನ್ನೇನು ಮಳೆ ಹೋಯ್ತು ಅಂದ್ರೆ, ರಾಜ್ಯದಲ್ಲಿ ಮತ್ತೆ ಮಳೆ ಶುರುವಿಟ್ಟಿದೆ.
ರಾಜ್ಯದ ವಿವಿಧ ಜಿಲ್ಲೆಯಲ್ಲಿ ಇನ್ನೂ ಒಂದು ವಾರ ಜಿಟಿಜಿಟಿ ಮಳೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕ ಸೇರಿದಂತೆ ನೆರೆಹೊರೆಯ ರಾಜ್ಯದಲ್ಲಿ ಫೆಂಗಲ್ ಚಂಡಮಾರುತದ ಅಬ್ಬರ ತಗ್ಗಿದರೂ ಅದರ ಎಫೆಕ್ಟ್ ಇನ್ನೂ ಕಡಿಮೆಯಾಗುತ್ತಿಲ್ಲ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಲೂ ಕೂಡ ಮಳೆ ಯಾಗುತ್ತಿದೆ.
ಚಂಡಮಾರುತದ ಅಬ್ಬರ ತಗ್ಗಿದ ಹಿನ್ನಲೆ ಮಳೆಯೂ ತಗ್ಗಲಿದೆ ಎಂದು ರೈತರು ಭಾವಿಸಿದ್ದರು, ಆದರೆ ಇನ್ನೂ ಡಿಸೆಂಬರ್ 12 ರವರೆಗೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯೆತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ ರಾಗಿ, ಭತ್ತ ಕೊಯ್ಲಿನಲ್ಲಿದ್ದ ರೈತರಿಗೆ ಟಿನ್ಷನ್ ಹೆಚ್ಚಿಸಿದೆ.
ದಕ್ಷಿಣ ಕರ್ನಾಟಕದಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಹಾಸನ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಉತ್ತರ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಬಾಗಲಕೋಟೆ, ಹಾವೇರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.



