ಬೆಂಗಳೂರು: ರಾಜ್ಯದ ವಿವಿಧ ಕಡೆ ಇಂದು(ಏ.11) ಭಾರೀ ಮಳೆಯಾಗಿದ್ದು, ಬಿರು ಬಿಸಿಲಿಗೆ ತತ್ತರಿಸಿದ್ದ ಧರೆಗೆ ವರುಣ ತುಸು ತಂಪೆರೆದಿದ್ದಾನೆ. ವಿಜಯಪುರ ತಾಲೂಕಿನಲ್ಲಿ ತಿಕೋಟ ಗ್ರಾಮದಲ್ಲಿ ಭಾರೀ ಮಳೆಯಾಗಿದ್ದು, ಇಂಡಿ ತಾಲೂಕಿನ ಮಾವಿನಹಳ್ಳಿಯಲ್ಲಿ ಗುಡುಗು ಸಹಿತ ಮಳೆಯಾಗಿದೆ. ಈ ವೇಳೆ ಸಿಡಿಲು ಬಡಿದು ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. ಬೀರಪ್ಪ ನಿಂಗಪ್ಪ ಅವರಾದಿ(16) ಮೃತ ರ್ದುದೈವಿಯಾಗಿದ್ದಾನೆ.
ಭಾರೀ ಬಿಸಿಲಿನಿಂದ ಕೆಂಡದಂತಾಗಿದ್ದ ಕಲಬುರಗಿರಯಲ್ಲಿ ಇಂದು ಮಳೆರಾಯ ತಂಪೆರೆದಿದ್ದಾನೆ. ಜಿಲ್ಲೆಯ ಅಫಜಲಪುರ ತಾಲೂಕಿನ ಹಲವೆಡೆ ಗುಡುಗು, ಮಿಂಚು ಸಹಿತ ಧಾರಕಾರ ಮಳೆಯಾಗಿದೆ. ಇನ್ನೂ ಮಲೆನಾಡು ಭಾಗದಲ್ಲಿ ಇಂದು ಗುಡುಗು ಸಹಿತ ಮಳೆಯಾಗಿದೆ. ಕೆರೆಮಕ್ಕಿ, ಬೈಗೂರು, ಹಂಗರವಳ್ಳಿ, ಆವುತಿ ಸೇರಿದಂತೆ ಕೆಲವು ಕಡೆ ಜೋರು ಮಳೆಯಾಗಿದೆ. ಜೊತೆಗೆ ಮಳೆಯಿಂದ ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ದಾವಣಗೆರೆ, ಚಿತ್ರದುರ್ಗ, ಹಾವೇರಿ ಭಾಗದಲ್ಲಿ ಅಡಿಕೆ ತೋಟಗಳು ನೀರಿಲ್ಲದೆ ಒಣಗುತ್ತಿವೆ. ರೈತರು ಮಳೆಗಾಗಿ ಮುಗಿಲು ನೋಡುತಗತಿದ್ದಾರೆ. ಅಂತರ್ಜಲ ಮಟ್ಟ ತೀವ್ರ ಕುಸಿದಿದ್ದು, ಬೋರ್ ವೆಲ್ ಗಳು ಬತ್ತಿ ಹೋಗಿವೆ.