ಬೆಂಗಳೂರು: ಡಿಸೆಂಬರ್ 17 ರಿಂದ ಮೂರು ದಿನ ರಾಜ್ಯದ ಕೆಲ ಜಿಲ್ಲೆಯಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜ್ಯದಲ್ಲಿ ಎರಡು ದಿನದಿಂದ ಚಳಿ ಹೆಚ್ಚಾಗಿದೆ. ಮುಂದಿನ 24 ಗಂಟೆಗಳ ಕಾಲ 6 ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಬರಲಿದೆ. ಡಿಸೆಂಬರ್ 17 ರಿಂದ ಕರಾವಳಿಯಲ್ಲಿ ಜೋರು ಮಳೆಯಾಗಲಿದೆ.
ಕರಾವಳಿಯ ಮೂರು ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗಲಿದೆ. ದಕ್ಷಿಣ ಒಳನಾಡು ಜಿಲ್ಲೆಗಳಾದ ಚಾಮರಾಜನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು, ಹಾಸನ, ಚಿಕ್ಕ ಮಗಳೂರು, ಮೈಸೂರು, ರಾಮನಗರ ಈ ಜಿಲ್ಲೆಗಳಲ್ಲಿ ದಿನ ಬಿಟ್ಟು ದಿನ ಮಳೆ ಆಗಲಿದೆ. ಒಂದೆರಡು ಕಡೆಗಳಲ್ಲಿ ಸಾಧಾರಣಕ್ಕಿಂತ ಅತ್ಯಧಿಕ ಪ್ರಮಾಣದ ಮಳೆ ಆಗಲಿದೆ.
ರಾಜ್ಯದಲ್ಲಿ ಹಿಂಗಾರು ಮಳೆ ಚುರುಕುಗೊಳ್ಳುವ ಜೊತೆಗೆ ಚಳಿ ಹೆಚ್ಚಾಗುವ ಮುನ್ಸೂಚನೆ ದೊರೆತಿದೆ. ಉತ್ತರ ಒಳನಾಡಿನಲ್ಲಿ ಒಣಹವೆ ಇದ್ದರೂ ಚಳಿಯ ಪ್ರಮಾಣ ಹೆಚ್ಚಿರಲಿದೆ. ರಾಜ್ಯದ ಬಹುತೇಕ ಕಡೆ ಗರಿಷ್ಠ ತಾಪಮಾನ ಇಳಿಕೆ ಆಗಿದೆ.



