ಬೆಂಗಳೂರು: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) 402 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸೆಪ್ಟೆಂಬರ್ 22 ರಂದು ನಿಗದಿಪಡಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯನ್ನು 28 ರಂದು ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಆ ದಿನ ಕೂಡ ಯುಪಿಎಸ್‌ಸಿ ಪರೀಕ್ಷೆ ಇರುವ ಕಾರಣ ಅಭ್ಯರ್ಥಿಗಳ ಮನವಿಯ ಮೇರೆಗೆ ಮತ್ತೆ ಮುಂದೂಡಲು ನಿರ್ಧರಿಸಿದ್ದು, ಅ.3ರಂದು ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ರಾಜ್ಯದಲ್ಲಿ ಖಾಲಿ ಇರುವ 402 ಪಿಎಸ್‌ಐ ಹುದ್ದೆಗಳಿಗೆ ಸೆ.22ರಂದು ನಡೆಸಲು ನಿಗಧಿಯಾಗಿದ್ದ ಪರೀಕ್ಷೆಯನ್ನು ಮುಂದೂಡುವಂತೆ ಒತ್ತಾಯ ಕೇಳಿ ಬಂದಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅವರೊಂದಿಗೆ ಚರ್ಚಿಸಿ, ಸೆ.28ರಂದು ನಡೆಸಲು ತೀರ್ಮಾನಿಸಲಾಗಿತ್ತು. ಆ ದಿನ ಯುಪಿಎಸ್‌ಸಿ ಇಂಗ್ಲೀಷ್ ಕಡ್ಡಾಯ ಪರೀಕ್ಷೆ ಇರುವುದರಿಂದ ಅಕ್ಟೋಬರ್ 3ರಂದು ನಡೆಸಲು ನಿರ್ಧರಿಸಲಾಗಿದೆ. ಕೆಇಎ ಅವರು ಅಧಿಕೃತವಾಗಿ ಪ್ರಕಟಣೆ ಮಾಡಲಿದ್ದಾರೆ ಎಂದು ತಿಳಿಸಿದರು.



