ಬೆಂಗಳೂರು: ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಹೆಚ್ಚಿನ ಲಾಭಾಂಶ ಗಳಿಸುವಲ್ಲಿ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆ ಮುಂಚೂಣಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಿ ಇನ್ನು ಹೆಚ್ಚಿನ ಲಾಭಾಂಶಗಳನ್ನು ಗಳಿಸುವ ದೃಷ್ಠಿಯಿಂದ ಹೊಸ ಗಣಿಗುತ್ತಿಗೆಗಳ ಅನುಮೋದನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸ್ಥಗಿತಗೊಂಡಿರುವ ಕೆಲವು ಗಣಿಗಳ ಪುನರ್ ಪ್ರಾರಂಭಕ್ಕೆ ಕ್ರಮವಹಿಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಇಲಾಖೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದರು.
ವಿಧಾನಸೌಧದಲ್ಲಿ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆಯ 2025ನೇ ವರ್ಷದ ನೂತನ ಕ್ಯಾಲೆಂಡರ್ ಹಾಗೂ ಟೇಬಲ್ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮಾನವ ಸಂಪನ್ಮೂಲ ಕೊರತೆಯನ್ನು ನೀಗಿಸಲು ಮತ್ತು ಪುನರ್ ಪ್ರಾರಂಭವಾಗುತ್ತಿರುವ ಗಣಿಗಳ ಅವಶ್ಯಕತೆಯಂತೆ ಹೊಸದಾಗಿ ಉದ್ಯೋಗಿಗಳ ನೇಮಕಕ್ಕೆ ಕ್ರಮವಹಿಸಿರುತ್ತದೆ ಎಂದರು.
ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ (KSMCL) (ಹಿಂದಿನ MML) ಒಂದು ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದ್ದು, ರಾಜ್ಯದಲ್ಲಿ ದೊರೆಯುವ ವಿವಿಧ ಅದಿರು ಮತ್ತು ಅಲಂಕಾರಿಕ ಗ್ರಾನೈಟ್ ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿರುತ್ತದೆ. ಸಂಸ್ಥೆಯು 2003-2004 ನೇ ಸಾಲಿನಿಂದ ಸತತವಾಗಿ ಲಾಭಾಂಶದಲ್ಲಿ ತೊಡಗಿದ್ದು 2021-22ನೇ ಸಾಲಿನಲ್ಲಿ ಅತ್ಯಧಿಕ ವಹಿವಾಟು ರೂ. 1610.00 ಕೋಟಿಗಳಾಗಿದ್ದು ತೆರಿಗೆ ನಂತರ ನಿವ್ವಳ ಲಾಭ ರೂ. 787.00 ಕೋಟಿಗಳಾಗಿರುತ್ತದೆ. ಕಳೆದ ಸಾಲಿನಲ್ಲಿ ರೂ. 1473.00 ಕೋಟಿಗಳ ವಹಿವಾಟು ಮಾಡಿರುತ್ತದೆ ಎಂದು ತಿಳಿಸಿದರು.
ಪ್ರತಿ ವರ್ಷ ತನ್ನ ಲಾಭಾಂಶದ 30% ಮೊತ್ತವನ್ನು ಹಾಗೂ ಕಳೆದ ಸಾಲಿನಿಂದ ಲಭ್ಯವಿರುವ ಹೆಚ್ಚುವರಿ ಮೊತ್ತದ ಮೇಲೆ 30% ವಿಶೇಷ ಡಿವಿಡೆಂಡ್ ಮೊತ್ತವಾಗಿ ಸರ್ಕಾರಕ್ಕೆ ಪಾವತಿ ಮಾಡಲಾಗುತ್ತಿರುತ್ತದೆ. ಅಲ್ಲದೆ ವಾರ್ಷಿಕವಾಗಿ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ರೂ. 15 ರಿಂದರೂ. 20.00 ಕೋಟಿ ನೀಡುತ್ತಿದ್ದು, ಲಾಭಾಂಶದಲ್ಲಿ 2% ಅನ್ನು ಸಿಎಸ್‍ಆರ್‍ಗೆ ಉಪಯೋಗಿಸಲಾಗುತ್ತಿದೆ ಎಂದರು.
ಸಂಸ್ಥೆಯು ಗಣಿ ಚಟುವಟಿಕೆಗಳ ಜೊತೆ ಇತರೆ ಚಟುವಟಿಕೆಗಳಿಗೆ ಬಂಡವಾಳ ಹೂಡಿಕೆಯಲ್ಲಿ ತೊಡಗಿದ್ದು ಇತ್ತೀಚೆಗೆ ರೇಷ್ಮೆ ಇಲಾಖೆಯ ಜೊತೆ ಜಂಟಿ ಸಹಭಾಗಿತ್ವದಲ್ಲಿ ರೂ. 666.00 ಕೋಟಿಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಮತ್ತು ಹಾಸನದಲ್ಲಿ ಸಂಸ್ಥೆಯು ಹೊಂದಿರುವ 14.00 ಎಕರೆ ಪ್ರದೇಶದಲ್ಲಿ ಸುಮಾರು ರೂ. 200.00 ಕೋಟಿ ಹೂಡಿಕೆ ಮಾಡಿ ಐಟಿ ಪಾರ್ಕ್ ನಿರ್ಮಾಣ ಮಾಡಲು ಕ್ರಮವಹಿಸಿರುತ್ತದೆ.
ಸಂಸ್ಥೆಯ ವಹಿವಾಟು ಮತ್ತು ಲಾಭಾಂಶಗಳನ್ನು ಆಧಾರವಾಗಿಟ್ಟುಕೊಂಡು ಸರ್ಕಾರವು 2017 -18 ನೇ ಸಾಲಿನಿಂದ ಸತತವಾಗಿ ಮುಖ್ಯಮಂತ್ರಿಯವರ ವಾರ್ಷಿಕ ರತ್ನ ಪ್ರಶಸ್ತಿಯನ್ನು ನೀಡುತ್ತಾ ಬಂದಿರುತ್ತದೆ. ಗಣಿಗಾರಿಕೆಯಲ್ಲಿ ಉತ್ತಮ ಪರಿಸರ ನಿರ್ವಹಣೆ ಮಾಡಿರುವ ಪ್ರಯುಕ್ತ 2023 ಮತ್ತು 2024ನೇ ಸಾಲಿನ ಪ್ರತಿಷ್ಠಿತ SKOCH Award ಪಡೆದಿರುತ್ತದೆ. ಚಾಲ್ತಿ ಸಾಲಿನ ವರ್ಷದಿಂದ ISO ಪ್ರಮಾಣಪತ್ರವನ್ನು ಪಡೆದಿರುತ್ತದೆ ಎಂದು ತಿಳಿಸಿದರು.
2025ನೇ ವರ್ಷದ ಈ ಸಂಸ್ಥೆಯ ನೂತನ ಡೈರಿಯನ್ನು ಕೆ.ಎಸ್.ಎಂ.ಸಿ.ಎಲ್ ಸಂಸ್ಥೆಯ ಅಧ್ಯಕ್ಷರು ಹಾಗೂ ರೋಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಎಸ್. ಪಾಟೀಲ್ ಅವರು ಅನಾವರಣಗೊಳಿಸಿದರು.ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಯ ವಿಭವಸ್ವಾಮಿ, ಹಾಗೂ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಎಸ್. ನವೀನ್ ಕುಮಾರ್ ರಾಜು ಹಾಗೂ ಸಂಸ್ಥೆಯ ಎಲ್ಲಾ ಅಧಿಕಾರಿಗಳು,ಸಿಬ್ಬಂದಿಗಳು ಉಪಸ್ಥಿತರಿದ್ದರು.