ಮಂಡ್ಯ: ಅಕ್ರಮ ಸಕ್ರಮ ಯೋಜನೆಯಡಿ ರೈತರ ಜಮೀನಿನ ಬೋರ್ ವೆಲ್ ನಿಂದ 500 ಮೀಟರ್ ಒಳಗೆ ವಿದ್ಯುತ್ ಕಂಬ ಇದ್ದರೆ ಇಲಾಖೆ ವೆಚ್ಚದಲ್ಲಿಯೇ ವಿದ್ಯುತ್ ಸಂಪರ್ಕ ಕಲ್ಪಿಸಿ, ವಿದ್ಯುತ್ ಪರಿವರ್ತಕ (ಟಿಸಿ) ಅಳವಡಿಕೆ ಮಾಡಲಾಗುವು. ಒಂದು ವೇಳೆ 500 ಮೀಟರ್‌ಗಿಂತ ಹೆಚ್ಚಿನ ದೂರ ಇದ್ದಲ್ಲಿ ಅಂತಹ ಬೋರ್‌ವೆಲ್‌ಗಳನ್ನು ಸೋಲಾರ್ ಪಂಪ್‌ಸೆಟ್ ಯೋಜನೆಗೆ ಒಳಪಡಿಸಿ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ನಡೆದ ಇಂಧನ ಇಲಾಖೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ,2004ರಿಂದಲೂ ರಾಜ್ಯದಲ್ಲಿ 4.5 ಲಕ್ಷ ಅಕ್ರಮ ಐ.ಪಿ.ಸೆಟ್‌ಗಳಿದ್ದು, ಇವುಗಳ ಸಕ್ರಮಕ್ಕೆ ಯಾವುದೇ ಸರ್ಕಾರಗಳು ಕ್ರಮ ಕೈಗೊಂಡಿರಲಿಲ್ಲ. ನಾನು ಇಂಧನ ಖಾತೆ ಸಚಿವರಾದ ಬಳಿಕ ಸಂಪುಟದಲ್ಲಿ 4.5ಲಕ್ಷ ಅಕ್ರಮ ಐಪಿ ಸೆಟ್‌ಗಳನ್ನು ಸಕ್ರಮಗೊಳಿಸಿ ಮೂಲ ಸೌಲಭ್ಯ ಒದಗಿಸಲು ಅನುಮತಿ ಪಡೆಯಲಾಗಿತ್ತು. ನಂತರ 2.5 ಲಕ್ಷ ಐಪಿ ಸೆಟ್‌ಗಳನ್ನು ಸಕ್ರಮಗೊಳಿಸಿ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಉಳಿದ 2 ಲಕ್ಷ ಐಪಿ ಸೆಟ್‌ಗಳನ್ನು ಒಂದು ವರ್ಷದೊಳಗೆ ಸಕ್ರಮಗೊಳಿಸಿ ಮೂಲ ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಶೇ.80ರಷ್ಟು ಸರ್ಕಾರದ ವೆಚ್ಚ: 500 ಮೀಟರ್‌ಗಿಂತ ಹೆಚ್ಚು ದೂರವಿರುವ ಬೋರ್‌ವೆಲ್‌ಗಳಿಗೆ ವಿದ್ಯುತ್ ಕಂಬಗಳಿಂದ ವಿದ್ಯುತ್ ಸಂಪರ್ಕ ಕೊಡುವುದರ ಬದಲು ಸೋಲಾರ್ ಅಳವಡಿಸಲು ಯೋಜನೆ ಜಾರಿಗೊಳಿಸಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರ ಶೇ.30 ಹಾಗೂ ರಾಜ್ಯ ಸರ್ಕಾರ 50 ಸೇರಿ ಒಟ್ಟು ಶೇ. 80ರಷ್ಟು ರಿಯಾಯ್ತಿ ದರದಲ್ಲಿ ನೀಡಲಾಗುತ್ತದೆ. ರೈತರು ಕೇವಲ ಶೇ.20ರಷ್ಟು ಹಣ ನೀಡಿದರೆ ಸಾಕು. ಸೋಲಾರ್ ಸಿಸ್ಟಮ್ ಬಳಕೆ ಮಾಡಿಕೊಳ್ಳಬಹುದು ಎಂದರು.
ಕಳೆದ ವರ್ಷ ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡುವುದು ಕಷ್ಟವಾಗಿತ್ತು. ಆದರೆ, ಈ ಬಾರಿ ವಿದ್ಯುತ್ ಎಲ್ಲೆಡೆಯಿಂದ ದೊರೆಯುತ್ತಿದೆ. 1 ಯೂನಿಟ್‌ಗೆ 9 ರೂ.ನಂತೆ ಖರೀದಿಸಲಾಗುತ್ತಿದ್ದ ವಿದ್ಯುತ್ ಪ್ರಸ್ತುತ 6 ರೂ. ದರದಲ್ಲಿ ಸಿಗುವ ಸಾಧ್ಯತೆಗಳಿವೆ. ರೈತರ ಹಿತದೃಷ್ಟಿಯಿಂದ ವಿದ್ಯುತ್ ಖರೀದಿ ಮಾಡಲು ಸಿದ್ಧರಿದ್ದೇವೆ. ಅದನ್ನು ಸಮರ್ಪಕವಾಗಿ ಪೂರೈಸುವ ವ್ಯವಸ್ಥೆ ಮಾಡಿಕೊಳ್ಳುವಂತೆ ಜಿಲ್ಲಾ ಮಟ್ಟದ ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಶಾಸಕರೂ ಆದ ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ಶಾಸಕರಾದ ದಿನೇಶ್ ಗೂಳಿಗೌಡ, ಕೆ.ಉದಯ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ವಿದ್ಯುತ್ ಇಲಾಖೆ ಅಧಿಕಾರಿಗಳು ಇದ್ದರು.