ದಾವಣಗೆರೆ: ಕೋವಿಡ್ 19 ಕಳೆದ ವರ್ಷದಿಂದ ವಿಶ್ವದಲ್ಲಿಯೇ ಆತಂಕ ಮೂಡಿಸಿರುವ ಹೆಸರು. ಕೋವಿಡ್ ವಿಚಾರವನ್ನು ಇಟ್ಟುಕೊಂಡು ಈಗ ಅಂತರಾಷ್ಟ್ರೀಯ ಪತ್ರ ಲೇಖನ ಸ್ಪರ್ಧೆಯನ್ನು ಭಾರತೀಯ ಅಂಚೆ ಇಲಾಖೆ ಆಯೋಜಿಸಿದೆ. ವಿಜೇತರಾದವರಿಗೆ ನಗದು ಬಹುಮಾನವನ್ನು ನೀಡಲಾಗುತ್ತದೆ.
ಭಾರತೀಯ ಅಂಚೆ ಇಲಾಖೆ ಚಿತ್ರದುರ್ಗ ವಿಭಾಗದ ವತಿಯಿಂದ 15 ವರ್ಷದ ಒಳಗಿನ ಯುವಜನತೆಗೆ ಈ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ. ಕೋವಿಡ್ 19 ಕುರಿತ ತಮ್ಮ ಅನುಭವವನ್ನು ತಮ್ಮ ಕುಟುಂಬದ ಸದಸ್ಯರಿಗೆ ಪತ್ರ ಬರೆಯುವ ಮೂಲಕ ವಿವರಿಸಬೇಕು.
ಈ ಅಂತರಾಷ್ಟ್ರೀಯ ಪತ್ರ ಲೇಖನ ಸ್ಪರ್ಧೆಯನ್ನು ಮಾರ್ಚ್ 28ರಂದು ಆಯೋಜನೆ ಮಾಡಲಾಗಿದೆ
ಸ್ಪರ್ಧೆಯು ಒಂದು ಗಂಟೆಯ ಅವಧಿಯದಾಗಿದ್ದು, 100 ಅಂಕಗಳನ್ನು ಒಳಗೊಂಡಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು 800 ಪದಗಳನ್ನು ಮೀರದಂತೆ ಪತ್ರ ಬರೆಯಬೇಕು. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ತಮ್ಮ ಮೂರು ಭಾವಚಿತ್ರದೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.
ನಗದು ಬಹುಮಾನ; ಪತ್ರ ಲೇಖನ ಸ್ಪರ್ಧೆಯಲ್ಲಿ ಕರ್ನಾಟಕ ವೃತ್ತ ಮಟ್ಟದಲ್ಲಿ ಪ್ರಥಮ ಬಹುಮಾನ ರೂ. 25000, ದ್ವಿತೀಯ 10,000 ಹಾಗೂ ತೃತೀಯ 4,500 ರೂ.ಗಳಾಗಿವೆ. ಪ್ರಮಾಣ ಪತ್ರವನ್ನು ಸಹ ನೀಡಲಾಗುತ್ತದೆ.



