ಬಾಗಲಕೋಟೆ: ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ತಮ್ಮೂರಿನ ಸಮಸ್ಯೆ ಹೇಳಿಕೊಂಡಿದ್ದಕ್ಕೆ ಬಾದಾಮಿಯ ಶಾಸಕರೂ ಆಗಿರುವ ವಿಧಾನಸಭೆಯವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ನೂತನ ಸದಸ್ಯನನ್ನು ವೇದಿಕೆಯಿಂದ ಕೆಳಗೆ ಕಳುಹಿಸಿದ ಪ್ರಸಂಗ ನಡೆಯಿತು.
ಬಾದಾಮಿಯ ಶಾಸಕರ ಗೃಹ ಕಚೇರಿ ಆವರಣದಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಗ್ರಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಕಿತ್ತಲಿ ಗ್ರಾ.ಪಂ. ನೂತನ ಸದಸ್ಯ ಸಂಗಣ್ಣ ಜಾಬಣ್ಣವರ ಎಂಬುವವರು, ವೇದಿಕೆ ಮೇಲೇರಿ ಭಾಷಣ ಮಾಡುತ್ತಿದ್ದರು. ಮಲಪ್ರಭಾ ನದಿ ಪ್ರವಾಹಕ್ಕೆ ಸಿಲುಕಿದ ನಮ್ಮೂರಿನ ಸಮಸ್ಯೆ ಇನ್ನೂ ಹಾಗೆ ಇವೆ. ಸಿದ್ದರಾಮಯ್ಯ ಅವರು ನಮ್ಮೂರಿಗೆ ಬಂದು ಹೋದರು. ಆಸರೆ ಮನೆ ಸಂಪೂರ್ಣ ಹಾಳಾಗಿವೆ. ಸಿದ್ದರಾಮಯ್ಯ ಅವರು ಪಿಡಿಒಗೆ ಸೂಚನೆ ನೀಡಿದರೂ ಯಾವ ಸಮಸ್ಯೆಯೂ ಬಗೆಹರಿದಿಲ್ಲ ಎಂದರು.

ಪಕ್ಷದ ಯಾವ ನಾಯಕರೂ ನಮ್ಮೂರಿನ ಕಡೆಗೆ ಬರುತ್ತಿಲ್ಲ. ಕಾಂಗ್ರೆಸ್ ಒಂದು ದೊಡ್ಡ ಪಕ್ಷ ಎಂದು ಪಕ್ಷದ ಸ್ಥಳೀಯ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದರು. ಈ ವೇಳೆ ಬಾದಾಮಿ ಮತ್ತು ಗುಳೇದಗುಡ್ಡ ಬ್ಲಾಕ್ ಕಾಂಗ್ರೆಸ್‌ನ ಕೆಲ ಪ್ರಮುಖರು, ಸದಸ್ಯ ಜಾವಣ್ಣವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಇಡೀ ಸಭೆಯಲ್ಲಿ ಗೊಂದಲದ ವಾತಾವರಣ ಸೃಷ್ಠಿಯಾಯಿತು. ಈ ವೇಳೆ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹಾಗೂ ಜಿ.ಪಂ. ಅಧ್ಯಕ್ಷೆ ಬಾಯಕ್ಕ ಮೇಟಿ ಅವರು ಸದಸ್ಯ ಸಂಗಣ್ಣ ಅವರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೂ, ಸದಸ್ಯ ಸಮಾಧಾನಗೊಳ್ಳದೇ ಭಾಷಣ ಮುಂದುವರೆಸಿದರು.
ಇದರಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದ ಜಾಬಣ್ಣನವರ ಬಳಿ ಬಂದು ಆಯ್ತಪ್ಪ ಎಲ್ಲ ಮಾಡೋಣ ನಡಿ ಎಂದು ಹೇಳಿದರು. ಅಷ್ಟಕ್ಕೆ ಸುಮ್ಮನಾಗದ ಸದಸ್ಯ, ಭಾಷಣ ಮಾಡುತ್ತಲೇ ಕಾಂಗ್ರೆಸ್ ದೊಡ್ಡ ಪಕ್ಷವಿದೆ. ಸ್ಥಳೀಯ ನಾಯಕರೂ ಯಾರೂ ಸ್ಪಂದಿಸುತ್ತಿಲ್ಲ. ನೀವೆಲ್ಲ ಹುಡಗಾಟ ಹಚ್ಚಿದ್ದೀರಾ ಎಂದರು. ಈ ಮಾತಿಗೆ ಆಕ್ರೋಶಗೊಂಡ ಸಿದ್ದರಾಮಯ್ಯ, ಆಯ್ತು ನೀ ನಡಿ ಎಂದು ಮೈಕ್ ಕಸಿದು ನೂಕಿ, ವೇದಿಕೆಯಿಂದ ಕೆಳಗೆ ಕಳುಹಿಸಿದರು.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ವಿಧಾನಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪುರ, ಮಾಜಿ ಸಚಿವರಾದ ಬಿ.ಬಿ. ಚಿಮ್ಮನಕಟ್ಟಿ, ಎಚ್.ವೈ. ಮೇಟಿ ಮುಂತಾದವರು ವೇದಿಕೆ ಮೇಲಿದ್ದರು.