ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್, ಯಡಿಯೂರಪ್ಪ ಡಕೋಟಾ ಬಸ್ ನಲ್ಲಿ ಕುಳಿತಿದ್ದು, ಅಲ್ಲಿಯೂ ಲೂಟಿ ಹೊಡೆಯುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.
ಪಕ್ಷೇತರ ಶಾಸಕ ಶರತ್ ಬಚ್ಚೇಗೌಡಗೆ ಕಾಂಗ್ರೆಸ್ ಸಹ ಸದಸ್ಯತ್ವ ನೀಡಿ ಮಾತನಾಡಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಡಕೋಟಾ ಬಸ್ ನಲ್ಲಿ ಕೂತಿದ್ದಾರೆ. ಅಲ್ಲಿಂದಲ್ಲೇ ಸ್ವಾಹಾ ಮಾಡುತ್ತಿದ್ದಾರೆ. ರಾಜ್ಯದಲ್ಲಿರುವುದು ಅಭಿವೃದ್ಧಿಪರ ಸರ್ಕಾರವಲ್ಲ. ಲೂಟಿ ಸರ್ಕಾರವಾಗಿದೆ ಎಂದು ವಾಗ್ದಾಳಿ ನಡೆಸಿದರು.
ನಾನು ಕಳೆದ ಬಾರಿ ಚುನಾವಣೆಯಲ್ಲಿ ಶರತ್ ವಿರುದ್ಧ ಪ್ರಚಾರ ಮಾಡಿದ್ದೆ. ಈಗ ಅವರು ಕಾಂಗ್ರೆಸ್ ಗೆ ಬೆಂಬಲ ನೀಡುತ್ತಿದ್ದು, ಅವರ ಬೆಂಬಲವನ್ನು ನಾವು ಒಪ್ಪಿದ್ದೇವೆ. ಎಂಟಿಬಿ ನಾಗರಾಜ್ ಸೋತು ಹಿಂಬಾಗಿಲ ಮೂಲಕ ಮಂತ್ರಿಯಾಗಿದ್ದಾರೆ.
ಸಚಿವರಾ ಮಾತ್ರಕ್ಕೆ ಅವರು ಹೊಸಕೋಟೆ ಜನರ ಪ್ರತಿನಿಧಿಯಲ್ಲ. ಶರತ್ ಬಚ್ಚೇಗೌಡ ಆ ಕ್ಷೇತ್ರದ ಪ್ರತಿನಿಧಿ. ಅವರು ಕ್ಷೇತ್ರದಲ್ಲಿ ಏಕಾಂಗಿಯಾಗಿ ಹೋರಾಡಲು ಸಾಧ್ಯವಿಲ್ಲ. ಹಾಗಾಗಿ ಕಾಂಗ್ರೆಸ್ ಅವರಿಗೆ ಬೆಂಬಲಿಸಲಿದೆ ಎಂದರು.



