ಬೆಂಗಳೂರು:ಕೊರೊನಾ ವೈರಸ್ಸ್‍ಗೆ ಲಸಿಕೆ ಬಂದಿದೆ. ಸರ್ಕಾರಕ್ಕೆ ತಗುಲಿರುವ ಭ್ರಷ್ಟಾಚಾರದ ವೈರಸ್ ಗೆ ಎಲ್ಲಿಂದ ಲಸಿಕೆ ತರುವುದು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಟ್ವಿಟರ್‍ನಲ್ಲಿ ಕೊರೊನಾ ನಿಯಂತ್ರಣ ಮತ್ತು ಅದಕ್ಕಾಗಿರುವ ಖರ್ಚುಗಳ ಬಗ್ಗೆ ಖಾರವಾದ ಪ್ರಶ್ನೆ ಕೇಳಿರುವ ಸಿದ್ದರಾಮಯ್ಯ, ಕೊರೊನಾ ನಿರ್ವಹಣೆಗಾಗಿ 5372ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಯಡಿಯೂರಪ್ಪ ಅವರು ಮೊನ್ನೆ ಮಂಡಿಸಿದ ಬಜೆಟ್‍ನಲ್ಲಿ ಹೇಳಿದ್ದಾರೆ. ಆದರೆ, ಖರ್ಚಿನ ವಿವರ ಮಾತ್ರ ತಿಳಿಸಿಲ್ಲ.ಈಗಲಾದರೂ ಆ ಹಣ ಯಾವ ಉದ್ದೇಶಗಳಿಗೆ ಖರ್ಚು ಮಾಡಿದ್ದಾರೆ ಎಂಬ ಲೆಕ್ಕ ವಿವರವನ್ನು ಜನರ ಮುಂದಿಡಬೇಕು ಎಂದು ತಿಳಿಸಿದ್ದಾರೆ.
ಕೊರೊನಾ ವೈರಸ್ಗೆ
ಲಸಿಕೆ ಬಂದಿದೆ,
ನಿಮ್ಮ ಸರ್ಕಾರಕ್ಕೆ ತಗಲಿರುವ ಭ್ರಷ್ಟಾಚಾರದ ವೈರಸ್ ಗೆ ಎಲ್ಲಿಂದ ಲಸಿಕೆ ತರುವುದು?ಕೊರೊನಾ ಮೊದಲ ಅಲೆಯ ನಿಯಂತ್ರಣದಲ್ಲಿನ ಲೋಪ-ದೋಷವನ್ನು ಎರಡನೇ ಅಲೆಯಲ್ಲಿಯಾದರೂ ತಿದ್ದಿಕೊಂಡು, ಕೊರೊನಾವನ್ನು ಭ್ರಷ್ಟಾಚಾರಕ್ಕೆ ದುರ್ಬಳಕೆ ಮಾಡಿಕೊಳ್ಳದೆ ಕೆಲಸ ಮಾಡಿ ಜನರನ್ನು ಉಳಿಸಿ.
4/4#coronavirus— Siddaramaiah (@siddaramaiah) March 19, 2021
ಕೊರೊನಾ ನಿಯಂತ್ರಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ನಮ್ಮ ಆರೋಪಕ್ಕೆ ಮತ್ತೆ ಸಾಕ್ಷಿ ಸಿಕ್ಕಿದೆ. ಕೊರೊನಾ ವೈರಸ್ ಎರಡನೇ ಅಲೆ ಮತ್ತೆ ಕೇಕೆ ಹಾಕುತ್ತಿದೆ. ಹಣವನ್ನು ಕೊರೊನಾ ನಿಯಂತ್ರಣಕ್ಕೆ ಖರ್ಚು ಮಾಡಿದ್ದರೆ ಸೋಂಕು ಏಕೆ ಉಲ್ಬಣಗೊಳ್ಳುತ್ತಿತ್ತು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕಾಗಿ ಹಣ ಖರ್ಚು ಮಾಡಬೇಕಿದೆ ಎಂಬ ಕುಂಟು ನೆಪ ಹೇಳಿ ಅಭಿವೃದ್ಧಿ ಚಟುವಟಿಕೆಗಳಿಗೆ ಅನುದಾನ ಕಡಿತ ಮಾಡಿರುವ ಯಡಿಯೂರಪ್ಪ ಈಗ ಏನು ಹೇಳುತ್ತಾರೆ. ಮೊದಲ ಅಲೆಯ ನಿಯಂತ್ರಣದ ಲೋಪದೋಷಗಳನ್ನು ಈಗಲಾದರೂ ತಿದ್ದಿಕೊಂಡು ಎರಡನೆ ಅಲೆಯ ನಿಯಂತ್ರಣದಲ್ಲಿ ಭ್ರಷ್ಟಾಚಾರ ಮಾಡದೆ, ಹಣ ದುರ್ಬಳಕೆ ಮಾಡಿಕೊಳ್ಳದೆ ಜನಪರ ಕೆಲಸ ಮಾಡಿ, ಜನರ ಪ್ರಾಣ ಉಳಿಸಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.



