ಬೆಂಗಳೂರು: ರಾಜ್ಯದ ಗ್ರಾಮಕ್ಕೊಂದು ಸ್ಮಶಾನ ಇರಬೇಕು. ಹೀಗಾಗಿ ಯಾವ ಗ್ರಾಮದಲ್ಲಿ ಸ್ಮಶಾನ ಇಲ್ಲವೋ ಅಲ್ಲಿನ ಜಿಲ್ಲಾಧಿಕಾರಿಗಳ ಮೂಲಕ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ವಿಧಾನ ಪರಿಷತ್‍ನಲ್ಲಿ ಮಹಾಂತೇಶ ಕವಟಗಿ ಮಠ ಪ್ರಶ್ನೆಗೆ ಉತ್ತರಿಸಿದ ಅವರು, ಗ್ರಾಮಕ್ಕೊಂದು ಸ್ಮಶಾನ ಇರಬೇಕು. ಇದಕ್ಕಾಗಿ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರ 26 ಕೋಟಿ ಬಿಡುಗಡೆ ಮಾಡಿದೆ. ಸರ್ಕಾರ ಹಣ ನೀಡುತ್ತದೆ. ಆದರೆ ಕೃಷಿ ಭೂಮಿಯ ಬೆಲೆ ಹೆಚ್ಚಿರುವುದರಿಂದ, ಸರ್ಕಾರ ನಿಗದಿ ಮಾಡಿರುವ ದರದಲ್ಲಿ ಜಾಗ ಖರೀದಿ ಮಾಡಲಾಗುತ್ತಿಲ್ಲ. ಅದಕ್ಕಾಗಿ ಜಿಲ್ಲಾಧಿಕಾರಿಗಳಿಂದ ವಿಶೇಷ ಪ್ರಸ್ತಾವನೆ ಪಡೆದು ಹೆಚ್ಚುವರಿ ಹಣ ನೀಡಿ, ಸ್ಮಶಾನಕ್ಕಾಗಿ ಭೂಮಿ ಖರೀದಿ ಮಾಡಲಾಗುವುದು ಎಂದರು.
ಬೆಳಗಾವಿ ಜಿಲ್ಲೆಯಲ್ಲಿ 816 ಸ್ಮಶಾನಗಳಿವೆ, 372 ಗ್ರಾಮಗಳಲ್ಲಿ ಸ್ಮಶಾನ ಇಲ್ಲ. ಬೆಳಗಾವಿ, ಹುಕ್ಕೇರಿಯಲ್ಲಿ ಎರಡು ಗ್ರಾಮಗಳಲ್ಲಿ ಮಾತ್ರ ಸ್ಮಶಾನ ಇಲ್ಲ. ಉಳಿದಂತೆ ಖಾನಾಪುರದಲ್ಲಿ ಸಮಸ್ಯೆ ಇದೆ. ಅಲ್ಲಿಂದ ವಿಶೇಷ ಪ್ರಸ್ತಾವನೆ ಪಡೆದು ಸ್ಮಶಾನ ಭೂಮಿ ಒಗದಿಸುವುದಾಗಿ ಸಚಿವರು ಹೇಳಿದರು.



