ವಿಜಯಪುರ: ಹಾವೇರಿ ಸಂಸದ ಶಿವಕುಮಾರ ಉದಾಸಿ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ,ಡಿ.ವಿ. ಸದಾನಂದಗೌಡ ಸೇರಿದಂತೆ ಸುಮಾರು ಎಂಟು ಲೋಕಸಭೆ ಸದಸ್ಯರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿಯ ಟಿಕೆಟ್ ಹಂಚಿಕೆಯಲ್ಲಿ ರಾಜ್ಯದ ಎಂಟು ಕ್ಷೇತ್ರಗಳಲ್ಲಿ ಬದಲಾವಣೆಯಾಗಲಿದ್ದು , ಹಾಲಿ ಎಂಟು ಸಂಸದರು ಸ್ವಯಂ ಪ್ರೇರಿತರಾಗಿ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯಲಿದ್ದಾರೆ. ಬೆಂಗಳೂರು ಉತ್ತರ ಸಂಸದ, ಮಾಜಿ ಸಿಎಂ ಸದಾನಂದ ಗೌಡ, ದಾವಣಗೆರೆ ಸಿದ್ದೇಶ್ವರ, ಹಾವೇರಿಯ ಶಿವಕುಮಾರ ಉದಾಸಿ ಸೇರಿದಂತೆ ಇತರರು ಹೊಸಬರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಸ್ವಯಂ ಪ್ರೇರಣೆಯಿಂದ ಸ್ಪರ್ಧೆಗೆ ಇಳಿಯುತ್ತಿಲ್ಲ.ವಿಜಯಪುರ ಕ್ಷೇತ್ರದಲ್ಲಿ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರನ್ನು ಗೆಲ್ಲಿಸುವ ಮೂಲಕ ಬಿಜೆಪಿ ಕ್ಷೇತ್ರ ಉಳಿಸಿಕೊಳ್ಳಲಿದ್ದೇವೆ ಎಂದರು.



