ಮೈಸೂರು : ನಾನು ಪಕ್ಷಕ್ಕೆ ರೆಬಲ್ ಅಲ್ಲ, ಲಾಯಲ್. ನನ್ನ ವಿರುದ್ಧ ಶಾಸಕರು, ಸಚಿವರ ಸಹಿ ಸಂಗ್ರಹಕ್ಕೆ ಹೆದರಲ್ಲ. ಪಕ್ಷದ ನಿಷ್ಟೆಯಲ್ಲಿ ಯಾವುದಕ್ಕೂ ಬಗ್ಗಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸಿಎಂ ವಿರುದ್ಧ ಮತ್ತೆ ಗರಂ ಆಗಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಇಲಾಖೆಯ ಅನುದಾನ ನನ್ನ ಗಮನಕ್ಕೆ ಬಾರದೇ ಬೇರೆ ಇಲಾಖೆಗೆ ನೀಡಲಾಗಿದೆ. ಇದನ್ನು ನಾನು ರಾಜ್ಯಪಾಲರು, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಪತ್ರದ ಮೂಲಕ ತಿಳಿಸಿದ್ದೇನೆ. ನಾನು ದೂರು ನೀಡಿಲ್ಲ. ನಾನು ರೆಬಲ್ ಅಲ್ಲ, ಲಾಯಲ್. ಹಣ ಹಂಚಿಕೆಯಲ್ಲಿ ಲೋಪದ ಬಗ್ಗೆ ಪ್ರಶ್ನೆ ಮಾಡಿದ್ದೇನೆ. ನಾನು ನಿಯಮಗಳ ಪಾಲನಗೆ ಪತ್ರವನ್ನು ಬರೆದಿದ್ದೇನೆ ಎಂದರು.
ನಿಯಮ ಅನ್ವಯ ಅನುದಾನ ಬಿಡುಗಡೆ ಮಾಡಿದ್ರೆ ನನ್ನ ಆಕ್ಷೇಪವಿರುತ್ತಿರಲಿಲ್ಲ. ಬಜೆಟ್ ನಲ್ಲಿ ಘೋಷಣೆಯಾದ ಹಣವನ್ನು ಆರ್ಥಿಕ ಇಲಾಖೆ ಆಯಾ ಇಲಾಖೆಗೆ ಬಿಡುಗಡೆ ಮಾಡಲಿದೆ. ಈ ನಿಯಮ ಮೀರಿ ಸಿಎಂ, ನಿಯಮ ಉಲ್ಲಂಘಿಸಿ ಅನುದಾನ ಬಿಡುಗಡೆಗೆ ಮಾಡಿದ್ದಾರೆ. ಇದನ್ನು ನಾನು ಪ್ರಶ್ನಿಸಿದ್ದೆನೆ ಎಂದರು.
ನನ್ನ ಇಲಾಖೆಯಲ್ಲಿ 1299 ಕೋಟಿ ಹಣ ನನ್ನ ಗಮನಕ್ಕೆ ಬಾರದೇ ಬಿಡುಗಡೆಯಾಗಿದೆ. ಇಲಾಖೆಯ ಹಣವನ್ನು ಸಂಬಂಧಿಸಿದಂತ ಸಚಿವರ ಗಮನಕ್ಕೆ ಬಾರದೆ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಮರಿಸ್ವಾಮಿಗೆ ನಿಯಮ ಬಾಹಿರವಾಗಿ 65 ಕೋಟಿ ಬಿಡುಗಡೆಗೆ ಸಿಎಂ ಸೂಚಿಸುತ್ತಾರೆ. ಇದು ಸರಿಯಾದ ಕ್ರಮ ಅಲ್ಲ. ೀ ಕಾರಣಕ್ಕೆ ನಾನು ಸಿಎಂ ನಡೆಯ ಬಗ್ಗೆ ರಾಜ್ಯಪಾಲರಿಗೆ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಪತ್ರ ಬರೆದಿದ್ದೇನೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.



