ಬೆಂಗಳೂರು: ವಿಧಾನಸಭಾ ಕಲಾಪದ ಮೂರನೆಯ ದಿನ ಬೆಲೆ ಏರಿಕೆ ಕುರಿತು ಬಿಸಿ ಬಿಸಿ ಚರ್ಚೆ ನಡೆದಿದ್ದು, ಒಂದು ಮಸಾಲೆ ದೋಸೆಗೆ ನೂರು ರೂಪಾಯಿ ಆಗಿದೆ. ಕಾಫಿ 15 ರೂಪಾಯಿಂದ 30 ರೂಪಾಯಿಗೆ ಏರಿಕೆಯಾಗಿದೆ. ಪ್ರತಿಯೊಂದು ಅಗತ್ಯ ವಸ್ತುವಿನ ಬೆಲೆ ಹೆಚ್ಚಳಕ್ಕೆ ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಕಾರಣ. ಬೆಲೆ ನಿಯಂತ್ರಣಕ್ಕೆ ಕೇಂದ್ರ, ರಾಜ್ಯ ಸರ್ಕಾರ ವಿಫಲವಾಗಿದ್ದು, ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಅನ್ನೋ ರೀತಿ ಬಿಜೆಪಿ ನಾಯಕರು ವರ್ತಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ಇಂಧನ ಬೆಲೆ ಏರಿಕೆಯೇ ಬೇರೆಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಲ್ಲ ಎಂದು ಆಡಳಿತ ಪಕ್ಷದ ಸದಸ್ಯರು ಸಮರ್ಥನೆಗೆ ಮುಂದಾರು. ಇದಕ್ಕೆ ಕಿಡಿಕಾರಿದ ಸಿದ್ದರಾಮಯ್ಯ, ಪ್ರತಿ ದಿನ ಸಾರ್ವಜನಿಕರು ಬೆಲೆ ಏರಿಕೆ ವಿರುದ್ಧ ಪ್ರಶ್ನೆ ಮಾಡ್ತಾರೆ. ಪ್ರತಿಪಕ್ಷ ಸುಮ್ಮನಿರಬೇಕಾ..? ಪ್ರತಿಪಕ್ಷದ ನಾಯಕನಾಗಿ ಜನರಿಗೆ ಏನು ಉತ್ತರ ಕೊಡಬೇಕೆಂದು ಪ್ರಶ್ನಿಸಿದರು.
ಮಧ್ಯಮ, ಕೆಳ ಮಧ್ಯಮ ವರ್ಗದ ಜನರು ಜೀವನ ನಡೆಸುವುದು ಕಷ್ಟವಾಗುತ್ತಿದೆ. ಅಕ್ಕಿ, ಬೇಳೆ, ಸಿಮೆಂಟ್, ಕಬ್ಬಿಣ, ಅಡುಗೆ ಅನಿಲ, ಅಡುಗೆ ಎಣ್ಣೆ, ಔಷಧಿ, ಸಾಗಾಣಿಕೆ ವೆಚ್ಚ. ಹೀಗೆ ಪ್ರತಿಯೊಂದರ ಬೆಲೆ ಗಗನಕ್ಕೇರಿದೆ. ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಹ್ಮಣ್ಯ ಸ್ವಾಮಿ ಅವರು ಈ ಹಿಂದೆ ನೀಡಿದ್ದ ರಾವಣನ ಲಂಕಾದಲ್ಲಿ ಪೆಟ್ರೋಲ್ ದರ ಲೀಟರ್ ಗೆ 51 ರೂ., ಸೀತಾ ದೇಶ ನೇಪಾಳದಲ್ಲಿ 53 ರೂ. ಗಳಿದ್ದರೆ ಶ್ರೀರಾಮ ರಾಜ್ಯವಾದ ಭಾರತದಲ್ಲೇಕೆ 93 ರೂ. ಎಂಬ ಹೇಳಿಕೆಯನ್ನು ಉಲ್ಲೇಖಿಸಿದರು.
ಕೇಂದ್ರ ಸರ್ಕಾರವು ಅಡುಗೆ ಅನಿಲ ಖರೀದಿಗೆ ನೀಡುತ್ತಿದ್ದ ಸಬ್ಸಿಡಿಯನ್ನು 2020ರಲ್ಲಿ ನಿಲ್ಲಿಸಿದ್ದೇಕೆ..? ಪ್ರಧಾನಿ ನರೇಂದ್ರ ಮೋದಿ ಸೌದೆ ಒಲೆಯೂದುವ ಅಕ್ಕ ತಂಗಿಯರ ಕಣ್ಣುರಿ, ಎದೆನೋವು ನಿಲ್ಲಿಸಲು ಸಬ್ಸಿಡಿ ಸಹಿತ ಅಡುಗೆ ಅನಿಲ ನೀಡುತ್ತೇವೆ ಎಂದು ಹೇಳಿದ್ದರು. ಆದರೆ ಈಗೇನಾಗಿದೆ? ಉಜ್ವಲ ಯೋಜನೆಯಡಿ 28 ಕೋಟಿ ಗ್ರಾಹಕರು ದೇಶಾದ್ಯಂತ ಇದ್ದಾರೆ. ಅಡುಗೆ ಅನಿಲ ದರ ಹೆಚ್ಚಳ ಮತ್ತು ಸಬ್ಸಿಡಿ ನಿಲ್ಲಿಸಿದ್ದರಿಂದ ಈ ಗ್ರಾಹಕರಿಗೆ ತೊಂದರೆಯಾಗುತ್ತಿಲ್ಲವೇ..? ಪೆಟ್ರೋಲ್, ಡೀಸಲ್ ಬೆಲೆ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಗಿಂತ ಇಂದಿನ ಎನ್ ಡಿಎ ಸರ್ಕಾರದ ಆಡಳಿತಾವಧಿಯಲ್ಲಿ ದುಪ್ಪಟ್ಟಾಗಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಸುಬ್ರಹ್ಮಣ್ಯ ಸ್ವಾಮಿಯವರದ್ದು ವೈಯಕ್ತಿಕ ಅಭಿಪ್ರಾಯ. ಅವರು ಯಾವ ಪಕ್ಷದಲ್ಲೇ ಇದ್ದರೂ ತಮ್ಮ ಸ್ವಭಾವ ಬಿಡುವುದಿಲ್ಲ. ಪ್ರತಿಯೊಂದನ್ನೂ ವಿಶ್ಲೇಷಿಸುತ್ತಾರೆ. ಪ್ರಜಾಪ್ರಭುತ್ಚದಲ್ಲಿ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದರು.
ಪೆಟ್ರೋಲ್ ಕಡಿಮೆ ಇರುವ ದೇಶಗಳಲ್ಲಿ ಸೀಮೆಎಣ್ಣೆಯನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ನ್ಯೂಜಿಲ್ಯಾಂಡ್ ನಂತಹ ದೇಶದಲ್ಲಿ ಪೆಟ್ರೋಲ್ ಲೀಟರ್ ಗೆ 125 ರೂ. ಇದೆ ಎಂದು ಸಚಿವ ಡಾ. ಸುಧಾಕರ್ ಹೇಳಿದರು.