ಬೆಂಗಳೂರು: ದಾವಣಗೆರೆ ಹಾಲಿ ಸಂಸದ ಜಿಎಂ ಸಿದ್ದೇಶ್ವರ್ ಬಂಡಾಯ ಬಿಸಿ ಜೋರಾಗಿದೆ. ಅವರ ವಿರುದ್ಧ ಮಾಜಿ ಶಾಸಕರು ಹಾಗೂ ಸ್ಥಳೀಯ ನಾಯಕರು ಬಂಡಾಯವೆದಿದ್ದು, ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಬಿಜೆಪಿ ಮಾಜಿ ಶಾಸಕರ ನಿಯೋಗ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಮುಂಬರುವ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಅಲರ್ಟ್ ಆಗಿರುವ ಜಿಎಂ ಸಿದ್ದೇಶ್ವರ ವಿರೋಧಿ ಬಣ, ರಾಜ್ಯ ಬಿಜೆಪಿ ಪವರ್ ಫುಲ್ ನಾಯಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಧಳವಗಿರಿ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್, ಮಾಜಿ ವಿಧಾನಪರಿಷತ್ ಸದಸ್ಯ ಶಿವಯೋಗಿ ಸ್ವಾಮಿ, ಮಾಜಿ ಮೇಯರ್ ಅಜಯ್ ಕುಮಾರ್, ಮಾಜಿ ಶಾಸಕರಾದ ಗುರುಸಿದ್ದನಗೌಡ್ರು, ಕರುಣಾಕರ ರೆಡ್ಡಿ, ಬಸವರಾಜ್ ನಾಯ್ಕ, ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ್ ಲೋಕಿಕೆರೆ ನಾಗರಾಜ್, ಡಾ|| ರವಿಕುಮಾರ್. ಚಂದ್ರಶೇಖರ್ ಪೂಜಾರ್ ಸೇರಿದಂತೆ 100ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಆಗಮಿಸಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಸಂಸದ ಜಿ.ಎಂ.ಸಿದ್ದೇಶ್ವರ್ ಚಿತ್ರದುರ್ಗದವರಾಗಿದ್ದು, ಅವರಿಗೆ ದಾವಣಗೆರೆ ಕ್ಷೇತ್ರದ ಟಿಕೆಟ್ ನೀಡದಂತೆ ಒತ್ತಾಯಿಸದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಸ್ಥಳೀಯರಿಗೆ ಟಿಕೆಟ್ ಕೊಡುವಂತೆ ಮನವಿ ಮಾಡಿದ ನಾಯಕರು, ಸರ್ವೇ ಮಾಡಿಸಿ ಯಾರ ಹೆಸರು ಬರುತ್ತದೋ ಅವರಿಗೆ ಟಿಕೆಟ್ ಕೊಡಿ ಎಂದು ಮನವಿ ಮಾಡಿದ್ದಾರೆ.
ಯಡಿಯೂರಪ್ಪ ಭೇಟಿ ಬಳಿಕ ಮಾತನಾಡಿದ ಮಾಜಿ ಶಾಸಕ ಎಸ್ಎ ರವೀಂದ್ರನಾಥ್, ಸ್ಥಳೀಯರಿಗೆ ಬಿಜೆಪಿ ಟಿಕೆಟ್ ಕೊಡುವಂತೆ ನಾವು ಮನವಿ ಮಾಡಿದ್ದೇವೆ. ಕೊಟ್ರೇಶ್, ರವಿ, ಶಿವಯೋಗಿ ಸ್ವಾಮಿ, ರೇಣುಕಾಚಾರ್ಯ ಆಕಾಂಕ್ಷಿಗಳಾಗಿದ್ದಾರೆ. ನಾನು ಲೋಕಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿ ಅಲ್ಲ. ಯಾರೇ ನಿಂತರೂ ಗೆಲ್ಲುತ್ತಾರೆ. ಸಿದ್ದೇಶ್ವರ್ಗೆ ಟಿಕೆಟ್ ನೀಡದಂತೆ ಮನವಿ ಮಾಡಲಾಗಿದೆ ಎಂದರು.
ದಾವಣಗೆರೆ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ, ದಾವಣಗೆರೆಯಲ್ಲಿ ಚುನಾವಣೆ ಪೂರ್ವ ಪಾರದರ್ಶಕ ಸಮೀಕ್ಷೆ ಮಾಡಲಿ. ನನಗೆ ಟಿಕೆಟ್ ಕೋಡಿ ಅಂದಿಲ್ಲ, ಸಮೀಕ್ಷೆ ಮಾಡಿ ಯಾರಿಗಾದರೂ ಕೊಡಲಿ. ಯಡಿಯೂರಪ್ಪ ಬಳಿ ಕಾರ್ಯಕರ್ತರ ಭಾವನೆಯನ್ನು ತಿಳಿಸುತ್ತೇನೆ ಎಂದರು. ಬೆಂಗಳೂರಿನಲ್ಲಿ ಯಡಿಯೂರಪ್ಪ ಭೇಟಿ ಬಳಿಕ ಮಾಜಿ ಸಚಿವ ಕರುಣಾಕರ ರೆಡ್ಡಿ, ಯಾರಿಗೂ ಟಿಕೆಟ್ ಕೊಡಬಾರದು ಅಂತಾ ಹೇಳಿಲ್ಲ. ಸಮೀಕ್ಷೆ ಮಾಡಿ ಟಿಕೆಟ್ ಕೊಡಿ ಎಂದರು.