ಬೆಂಗಳೂರು: ಯಡಿಯೂರಪ್ಪ ಅವರು ಲಿಂಗಾಯತ ನಾಯಕರನ್ನು ಮುಗಿಸಿದಂತೆ ಹಿಂದುಳಿದ ವರ್ಗಗಳ ನಾಯಕರನ್ನು ಮುಗಿಸಲು ಯತ್ನಿಸುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ ಯತ್ನಾಳ್, ಈ ಹಿಂದೆ ಯಡಿಯೂರಪ್ಪನವರು ಲಿಂಗಾಯತ ನಾಯಕರನ್ನು ವ್ಯವಸ್ಥಿತವಾಗಿ ಮುಗಿಸಿದ್ದಾರೆ. ಇದೀಗ ಈಶ್ವರಪ್ಪರಂತಹ ಹಿಂದುಗಳಿದ ವರ್ಗಗಳ ನಾಯಕರನ್ನು ಮುಗಿಸುತ್ತಿದ್ದಾರೆ.ಇದಕ್ಕೆ ಸಚಿವ ಕೆಎಸ್ ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಸಿಎಂ ಒಂದಿಷ್ಟು ಹೊಗಳು ಭಟರನ್ನು ಇಟ್ಟುಕೊಂಡಿದ್ದಾರೆ. ಅದೇ ಅವರ ಶಕ್ತಿ ಎಂದರು.
ಯತ್ನಾಳರ ಈ ಹೇಳಿಕೆಯನ್ನಿಟ್ಟುಕೊಂಡು ಕರ್ನಾಟಕ ಕಾಂಗ್ರೆಸ್ ಟ್ವಿಟ್ಟರ್ನಲ್ಲಿ ಯಡಿಯೂರಪ್ಪ ಅವರ ಕಾಲೆಳೆದಿದೆ. ಬಿಎಸ್ ವೈ ಅವರು ಲಿಂಗಾಯತ ನಾಯಕರನ್ನು ಮುಗಿಸಿದರು. ಈಗ ಹಿಂದುಳಿದ ವರ್ಗದ ನಾಯಕರನ್ನು ಮುಗಿಸುವ ಕಾರ್ಯಕ್ರಮ ಹಾಕಿದ್ದಾರೆ. ಯಡಿಯೂರಪ್ಪ ಅವರೇ ಯತ್ನಾಳ್ ಹೇಳಿದಂತೆ ಬಿ ಬಿ ಶಿವಪ್ಪನವರಿಂದ ಹಿಡಿದು ಇಂದಿನ ನಾಯಕರವರೆಗೂ ಎಲ್ಲರನ್ನೂ ಮುಗಿಸಿದಿರಿ ಅಲ್ಲವೇ? ನೀವು ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳದಿರುವುದು, ಅವರ ಆರೋಪ ಒಪ್ಪಿದಂತೆ! ಎಂದು ಟ್ವೀಟ್ ಮಾಡಿದೆ.



