ಬೆಂಗಳೂರು: ಬಿಜೆಪಿ ಜೊತೆ ಜೆಡಿಎಸ್ ವಿಲೀನ ಮಾಡಿಕೊಳ್ಳುವ ಬಗ್ಗೆ ಅನಗತ್ಯವಾಗಿ ಸಚಿವರಾಗಲಿ ಇಲ್ಲವೇ ಪಕ್ಷದ ಮುಖಂಡರಾಗಲಿ ಹೇಳಿಕೆಗಳನ್ನು ಮಾಧ್ಯಮಗಳಿಗೆ ನೀಡಬಾರದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ಧಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಜೆಡಿಎಸ್ ಪಕ್ಷ ಕೂಡ ಒಂದು ರಾಜಕೀಯ ಪಕ್ಷವಾಗಿದ್ದು, ಅವರು ತಮ್ಮ ಪಾಡಿಗೆ ತಾವು ಪಕ್ಷವನ್ನು ಸಂಘಟಿಸುತ್ತಿದ್ದಾರೆ. ಬಿಜೆಪಿ ಜೊತೆ ವಿಲೀನ ಮಾಡಿಕೊಳ್ಳಲಿದೆ ಎಂಬುದರ ಬಗ್ಗೆ ಅನಗತ್ಯವಾಗಿ ಹೇಳಿಕೆಗಳನ್ನು ಯಾರೊಬ್ಬರು ನೀಡಬಾರದು. ಇದರಿಂದ ಗೊಂದಲ ಉಂಟಾಗುತ್ತದೆ ಹೇಳಿದ್ದಾರೆ.
ವಿಧಾನಸಭೆ ಚುನಾವಣೆಗೆ ಇನ್ನು ಎರಡೂವರೆ ವರ್ಷ ಬಾಕಿಯಿದೆ. ಆಗಲೇ ಮೈತ್ರಿ ಇಲ್ಲವೇ ವಿಲೀನದ ಬಗ್ಗೆ ಮಾತನಾಡುವುದು ಯಾರೊಬ್ಬರಿಗೂ ಶೋಭೆ ತರುವುದಿಲ್ಲ. ಇದು ನಮ್ಮ ಪಕ್ಷದವರಿಗೆ ಅನ್ವಯವಾಗುತ್ತದೆ.ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದವರು. ನಮ್ಮ ಪಕ್ಷದ ಜೊತೆ ವಿಲೀನವಾಗುತ್ತದೆ ಎಂದು ಹೇಳಿದರೆ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರಿಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ. ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತದೆಯೋ ಇಲ್ಲವೋ ಎಂಬುದು ಕಾಲ ಬಂದಾಗ ತೀರ್ಮಾನವಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ವಿಲೀನ ಮಾಡಿಕೊಳ್ಳುವಂತಹ ಪರಿಸ್ಥಿತಿ ಉದ್ಭವಿಸಿಲ್ಲ.
ವಿಧಾನಪರಿಷತ್‍ನಲ್ಲಿ ಸಭಾಪತಿ ಪ್ರತಾಪ್‍ಚಂದ್ರಶೆಟ್ಟಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ನಮ್ಮ ಪಕ್ಷದವರು ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಅದಕ್ಕೆ ಜೆಡಿಎಸ್ ಬೆಂಬಲ ನೀಡಿದೆ. ಇಷ್ಟು ಮಾತ್ರಕ್ಕೆ ಆ ಪಕ್ಷ ಬಿಜೆಪಿ ಜೊತೆ ವಿಲೀನವಾಗಲಿದೆ ಎಂಬುದು ಸರಿಯಲ್ಲ ಎಂದು ಆಕ್ಷೇಪಿಸಿದರು. ನಿನ್ನೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಅವರು ಮುಂದಿನ ದಿನಗಳಲ್ಲಿ ಬಿಜೆಪಿ ಜೊತೆ ವಿಲೀನವಾಗಲಿದೆ ಎಂಬ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು.



