ಹಾವೇರಿ: ಪ್ರತಿ ಗ್ರಾಮದ ತಲಾ ಎರಡು ಸ್ತ್ರೀ ಶಕ್ತಿ ಹಾಗೂ ಯುವಶಕ್ತಿ ಸಂಘಗಳಿಗೆ ಐದು ಲಕ್ಷ ರೂ ಸಾಲ ಮತ್ತು ಅನುದಾನ ಕೊಡಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶಿಗ್ಗಾಂವಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಚೆನ್ನಮ್ಮನ ಶಕ್ತಿಯೊಂದಿಗೆ ರಾಜ್ಯದಲ್ಲಿ ಸ್ತ್ರೀ ಸಾಮರ್ಥ್ಯ ಯೋಜನೆ ಜಾರಿ ಮಾಡಲಿದ್ದೇವೆ. ಸುಮಾರು ಐದು ಲಕ್ಷ ಮಹಿಳೆಯರಿಗೆ ಉದ್ಯೋಗ ನೀಡುವ ಕಾರ್ಯಕ್ರಮ ಮಾಡುತ್ತಿದ್ದೇವೆ. ಜೊತೆಗೆ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಮಹಿಳೆಯರಿಗೆ ಮಾತ್ರವಲ್ಲದೆ ಯುವಕರಿಗಾಗಿ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಜಾರಿಗೆ ಮಾಡುತ್ತಿದ್ದೇವೆ. ಪ್ರತಿ ಗ್ರಾಮದ ಎರಡು ಯುವಶಕ್ತಿ ಸಂಘಗಳಿಗೆ ತಲಾ 5 ಲಕ್ಷ ರೂ ಅನುದಾನ ನೀಡಲಿದ್ದೇವೆ. ಈ ಮೂಲಕ ಸುಮಾರು ಐದು ಲಕ್ಷ ಯುವಕರಿಗೆ ಉದ್ಯೋಗ ನೀಡುವ ಯೋಜನೆ ಇದಾಗಿದೆ. ಈ ಎರಡೂ ಯೋಜನೆಗಳು ಡಿಸೆಂಬರ್‌ನಲ್ಲಿ ಜಾರಿಗೆ ಬರುತ್ತದೆ ಎಂದರು.
ಎಸ್ ಸಿ ಮತ್ತು ಎಸ್ ಟಿ ಮೀಸಲಾತಿ ಹೆಚ್ಚಳದ ವಿಚಾರ ಮಾತನಾಡಿ, ಈಗಾಗಲೇ ಗೆಜೆಟ್ ನೋಟಿಫಿಕೇಷನ್ ಆಗಿದೆ. ಬರುವ ವಿಧಾನಸಭೆ ಅಧಿವೇಶನದಲ್ಲಿ ಅನುಮೋದನೆ ಪಡೆದುಕೊಳ್ಳುತ್ತೇವೆ. ನನಗೆ ಈ ವಿಚಾರದಲ್ಲಿ ಬಹಳ ಸಂತೋಷ ಆಗುತ್ತಿದೆ. ಡಾ.ನಾಗಮೋಹನ ದಾಸ್ ವರದಿಯನ್ನು ಅನುಷ್ಠಾನ ಮಾಡಿಸೋ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಆ ಎಲ್ಲ ಜನಾಂಗದ ಮಕ್ಕಳಿಗೆ ನಾನು ಶುಭಾಶಯಗಳನ್ನು ಹೇಳುತ್ತೇನೆ ಎಂದರು.



