ಹಾವೇರಿ: ನಮಗೂ ಒಳ್ಳೆಯ ಕಾಲ ಬರುತ್ತೆ.. ಪ್ರಾಮಾಣಿಕರಾಗಿ ನರೇಂದ್ರ ಮೋದಿ ಪ್ರಧಾನಿ ಮಂತ್ರಿ ಆಗಲಿಲ್ವ? ಯತ್ನಾಳ್ ಏನು ಎಂಬುದು ಮುಂದಿನ ದಿನಗಳಲ್ಲಿ ಜನ ತೀರ್ಮಾನ ಮಾಡ್ತಾರೆ. ನಾನ್ಯಾಕೆ ಮುಖ್ಯಮಂತ್ರಿ ಆಗಬಾರ್ದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇರವಾಗಿ ಮಾತನಾಡುವವರು ಈ ದೇಶದಲ್ಲಿ ಪ್ರಧಾನಿಯಾಗಿದ್ದಾರೆ. ನಾನ್ಯಾಕೆ ಈ ಕರ್ನಾಟಕದ ಮುಖ್ಯಮಂತ್ರಿ ಆಗಬಾರದು? ನಾನು ಬೇರೆಯವರ ಕೈಕಾಲು ಹಿಡಿದಿದ್ರೆ, ಇಷ್ಟೊತ್ತಿಗೆ ಮುಖ್ಯಮಂತ್ರಿ ಆಗ್ತಿದ್ದೆ. ಜಗದೀಶ್ ಶೆಟ್ಟರ್, ಸದಾನಂದ ಗೌಡರು ಆಗ್ತಿರಲಿಲ್ಲ.ನಾನು ಆಹ್ವಾನ ಇಲ್ಲದೇ ಹೋಗುವಂತಹ ರಾಜಕಾರಣಿಯಲ್ಲ. ಯಾರನ್ನೋ ಖುಷಿ ಪಡಿಸುವ ರಾಜಕಾರಣಿ ನಾನಲ್ಲ ಎಂದರು.
ಪಕ್ಷದ ವಿರುದ್ಧ ಯಾರು ಹೇಳಿಕೆ ಕೊಟ್ಟಿದ್ದಾರೆ ಅನ್ನೋದನ್ನ ಬಹಿರಂಗ ಪಡಿಸಿ. ನಾನು ಅಭಿವೃದ್ಧಿ ಸಲುವಾಗಿ ಮಾತ್ರ ಮಾತನಾಡುತ್ತೇನೆ. ಅಭಿವೃದ್ಧಿಗೆ ಅನುದಾನ ಕೊಡಿ ಅಂತಾ ಮುಖ್ಯಮಂತ್ರಿಗಳನ್ನು ಕೇಳೋದು ತಪ್ಪಾ? ಶಾಸಕರುಗಳು ಏನು ಕೇಳದೇ ಇರಬೇಕಾ? ನನ್ನ ವಿರುದ್ಧ ಪಕ್ಷ ಯಾವುದೇ ಶಿಸ್ತುಕ್ರಮ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.
ಭದ್ರತೆ ಹಿಂಪಡೆದ ವಿಚಾರವಾಗಿ ಮಾತನಾಡಿ, ನಾನು ಸೆಕ್ಯೂರಿಟಿ ಬೇಕು ಅಂತ ಅರ್ಜಿ ಹಾಕಿಲ್ಲ. ಕೆಲವೊಬ್ಬರಿಗೆ ಸೆಕ್ಯೂರಿಟಿ ಬೇಕು ಎನ್ನುವ ಶೋಕಿ ಇರುತ್ತದೆ. ನಮಗೆ ಪ್ರಾಣ ಬೆದರಿಕೆ ಇದೆ ಎಂದು ತಲೆ ಕೆಡಿಸಿಕೊಂಡಿಲ್ಲ ಎಂದು ತಿಳಿಸಿದರು.



