ಬೆಂಗಳೂರು: ಪಂಚಮಸಾಲಿ ಸಮುದಾಯ ಹಿಂದುಳಿದ ವರ್ಗ 2ಎ ಮೀಸಲಾತಿಗೆ ಒಳಪಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ರಾತ್ರಿ ನಿಲುವು ಬದಲಿಸಿದ್ದು, ಈ ಕುರಿತು ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚಿಸಿದ್ದಾರೆ.
ಬೆಳಗ್ಗೆ ಸದನದಲ್ಲಿ ನಮ್ಮದು ರಾಷ್ಟ್ರೀಯ ಪಕ್ಷ. ಪ್ರಾದೇಶಿಕ ಪಕ್ಷವಲ್ಲ. ಇಲ್ಲಿ ನಾನೇ ಸ್ವಯಂ ಆಗಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇಂತಹ ವಿಷಯಗಳ ಬಗ್ಗೆ ಪ್ರಧಾನಿ ಮತ್ತಿತರ ಬಳಿ ಚರ್ಚಿಸಿ ಮುಂದಿನ ಹೆಜ್ಜೆ ಇಡಬೇಕಾಗುತ್ತದೆ. ಬೇಕಿದ್ದರೆ ನೀವು 25 ಸಂಸದರನ್ನು ಕೇಂದ್ರ ಸರ್ಕಾರ ಬಳಿ ಕರೆದುಕೊಂಡು ಹೋಗಿ ಕೇಳಿ ಎಂದಿದ್ದ ಸಿಎಂ ಯಡಿಯೂರಪ್ಪ. ರಾತ್ರಿ ಆಗುತ್ತಿದ್ದಂತೆ ನಿಲುವು ಬದಲಿಸಿದ್ದಾರೆ.
ರಾಜ್ಯದ ಲಿಂಗಾಯತ ಪಂಚಮಸಾಲಿ ಜನಾಂಗದವರು ತಮ್ಮ ಸಮಾಜ ಆರ್ಥಿಕವಾಗಿ, ಸಾಮಾಜಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಹಿಂದುಳಿದಿದೆ ಮತ್ತು ಸಮಾಜದ ಕಡುಬಡವರಿಗೆ ತೊಂದರೆಯಾಗುವುದರಿಂದ ಸಮಾಜವನ್ನು ಹಿಂದುಳಿದ ವರ್ಗ 2ಎ ಮೀಸಲಾತಿಗೆ ಒಳಪಡಿಸಬೇಕೆಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಆದೇಶಿಸಿದ್ದಾರೆ. ಅಧಿವೇಶನದಲ್ಲಿ ನನ್ನ ಹೇಳಿಕೆಯನ್ನು ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಅಪಾರ್ಥ ಮಾಡಿಕೊಂಡಿದ್ದಾರೆ. ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಬಗ್ಗೆ ನಾನು ಈಗಾಗಲೇ ಸಮಾಜದ ಸಚಿವರಾದ ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್ ಮತ್ತು ಶಾಸಕರ ಜೊತೆ ಚರ್ಚಿಸಿದ್ದೇನೆ ಎಂದು ಸಿಎಂ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.