ಬೆಂಗಳೂರು: ವೈದ್ಯಕೀಯ ಕಾಲೇಜು ಇಲ್ಲದ ರಾಜ್ಯದ 9 ಜಿಲ್ಲೆಗಳಲ್ಲಿ ಸಾರ್ವಜನಿಕ-ಸಹಭಾಗಿತ್ವ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಅಧ್ಯಯನ ಮಾಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ಬಿಜೆಪಿಯ ಎಸ್.ವಿ.ಸಂಕನೂರು ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸುಸಜ್ಜಿತ ಆಸ್ಪತ್ರೆ, ಅಗತ್ಯ ವೈದ್ಯರು ಹಾಗೂ ಇತರೇ ಸಿಬ್ಬಂದಿ ನೇಮಿಸಲಾಗುವುದು. ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲಾಗುತ್ತಿದ್ದು, 2021-22ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ವೈದ್ಯಕೀಯ ಕಾಲೇಜು ಸ್ಥಾಪಿಸಲು ಯೋಜನೆ ರೂಪಿಸಿದೆ.
ಚಿಕ್ಕಬಳ್ಳಾಪುರಕ್ಕೆ 508.11 ಕೋಟಿ ರೂ., ಹಾವೇರಿ 327.46 ಕೋಟಿ ರು., ಯಾದಗಿರಿ 309.54 ಕೋಟಿ ರು. ಮತ್ತು ಚಿಕ್ಕಮಗಳೂರು ಕಾಲೇಜಿಗೆ 302.70 ಕೋಟಿ ಟೆಂಡರ್ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ. ಈ ಪೈಕಿ ಚಿಕ್ಕಬಳ್ಳಾಪುರ ಕಾಲೇಜಿನ ಶೇ.40 ರಷ್ಟುಕಾಮಗಾರಿ ಪ್ರಗತಿಯಲ್ಲಿದೆ. ಜಾಗದ ಸಮಸ್ಯೆ ಇದ್ದ ಕಾರಣ ಉಳಿದ ಮೂರು ಜಿಲ್ಲೆಗಳ ಕಾಮಗಾರಿ ಶೇ.5 ರಿಂದ 8ರಷ್ಟುಪ್ರಗತಿಯಲ್ಲಿದೆ ಎಂದು ವಿವರಿಸಿದರು.
ಹುಬ್ಬಳ್ಳಿಯ ಶ್ರೀ ಜಗದ್ಗುರು ಗಂಗಾಧರ ಮಹಾಸ್ವಾಮಿಗಳ ಮೂರು ಸಾವಿರ ಮಠದ ಮೆಡಿಕಲ್ ಕಾಲೇಜ್ ಆರಂಭಕ್ಕೆ ಅನುಮತಿ ನೀಡುವಂತೆ 2020ರಲ್ಲಿ ಅರ್ಜಿ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿ, 150 ಎಂಬಿಬಿಎಸ್ ಸೀಟುಗಳ ಪ್ರವೇಶ ಮಿತಿಯೊಂದಿಗೆ 2021-22 ನೇ ಸಾಲಿನಿಂದ ಹೊಸದಾಗಿ ಪ್ರಾರಂಭಿಸಲು ಇಸಿ/ಎಫ್‌ಸಿ ನೀಡಲಾಗಿರುತ್ತದೆ ಎಂದರು.