ಬೆಂಗಳೂರು: ನಾಳೆ ಸಾರಿಗೆ ನೌಕರರ ಪ್ರತಿಭಟನೆ ಹಿನ್ನೆಲೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಖಾಸಗಿ ವಾಹನಗಳು ಎಲ್ಲಾ ಮಾರ್ಗದಲ್ಲಿ ಸಂಚರಿಸಲು ಅವಕಾಶ ನೀಡಿದ್ದೇವೆ. ಒಂದು ವೇಳೆ ಯಾರಾದರೂ ಪರಿಸ್ಥಿತಿಯ ಲಾಭ ಪಡೆದು ಹೆಚ್ಚಿನ ದರ ವಸೂಲಿ ಮಾಡಲು ಮುಂದಾದ್ರೆ, ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಕೆಎಸ್‍ಆರ್‍ಟಿಸಿ ಆಯುಕ್ತ ಶಿವಯೋಗಿ ಕಳಸಾದ್ ಎಚ್ಚರಿಸಿದ್ರು.
ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ವೇಳೆ ನಾಳೆ ಸಾರಿಗೆ ನೌಕರರು ಮುಷ್ಕರ ಭಾಗವಹಿಸಿದ್ರೆ, ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕಾಗಿ ಪರ್ಯಾಯ ಕ್ರಮ ಕೈಗೊಂಡಿದ್ದೇವೆ. ಟ್ಯಾಕ್ಸಿ, ಕ್ಯಾಬ್, ಸ್ಕೂಲ್ ವಾಹನಗಳು ಸೇರಿದಂತೆ ಖಾಸಗಿ ವಾಹನಗಳು ಪರ್ಯಾಯವಾಗಿ ಸಂಚರಿಸಲಿದ್ದು, ಯಾರು ಬೇಕಾದರೂ ಸಂಚರಿಸಬಹುದು. ಆದರೆ ಹೆಚ್ಚಿನ ದರವನ್ನು ತೆಗೆದುಕೊಳ್ಳುವಂತಿಲ್ಲ ಎಂದು ಸೂಚನೆ ಕೊಡಲಾಗಿದೆ.
ಸರ್ಕಾರ ನಿಗದಿಪಡಿಸಿರುವ ದರವನ್ನೇ ಪ್ರಯಾಣಿಕರಿಂದ ಪಡೆಯಬೇಕು. ಅಪ್ಪಿತಪ್ಪಿಯೂ ಹೆಚ್ಚಿನ ದರ ಪಡೆದಿರುವುದು ನಮ್ಮ ಗಮನಕ್ಕೆ ಬಂದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಅದಕ್ಕೆ ಯಾರೂ ಅವಕಾಶ ಕೊಡಬಾರದು ಎಂದರು.