ಬೆಂಗಳೂರು: ನಾಳೆಯ ಸಾರಿಗೆ ನೌಕರರ ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಕೆಗೆ ಪ್ರಯತ್ನ ಇಲ್ಲವೇ ಇಲ್ಲ. 6ನೇ ವೇತನ ಆಯೋಗ ಜಾರಿ ಕೂಡ ಸಾಧ್ಯವಿಲ್ಲ. ಒಂದು ವೇಳೆ ಸಾರಿಗೆ ನೌಕರರ ಪ್ರತಿಭಟನೆಗೆ ಮುಂದಾದ್ರೆ, ಪರ್ಯಾಯ ಮಾರ್ಗ ಅನುಸರಿಸುತ್ತೇವೆ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್ ಹೇಳಿದರು.
ಈ ಬಗ್ಗೆ ಸಿಎಂ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆ ಮಾಡುವವರ ವಿಷಯದಲ್ಲಿ ಕಾನೂನೂ ರೀತಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಡಕ್ ಆಗಿ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಲು ಸಾಧ್ಯವಿಲ್ಲಎಂದರು.
6ನೇ ವೇತನ ಆಯೋಗ ವೇತನ ಜಾರಿ ಸಾಧ್ಯವಿಲ್ಲ. ಕೊರೊನಾ ಸಂಕಷ್ಟ ಸಮಯದಲ್ಲಿಯೂ ಕೊಡುವಷ್ಟು ಕೊಟ್ಟಿದ್ದೇವೆ. ಇನ್ನು ಕೊಡಲು ಸಾಧ್ಯವಿಲ್ಲ. ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಎಸ್ಮಾ ಕಾಯ್ದೆ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಸಾರಿಗೆ ಬಸ್ ಗಳನ್ನು ಹಾನಿಗೊಳಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅವು ಸಾರ್ವಜನಿಕ ಸೊತ್ತು. ಅವುಗಳಿಗೆ ಹಾನಿಯಾದರೆ ಕ್ರಮ ಕೈಗೊಳ್ಳುತ್ತೇವೆ. ಮುಷ್ಕರ ನಿರತರ ನೌಕರರು ಕೆಲಸಕ್ಕೆ ಹಾಜರಾಗದಿದ್ದರೇ ವೇತನ ಕಡಿತಗೊಳಿಸಲಾಗುವ ನಿಯಮ ಕೂಡ ಜಾರಿಗೊಳಿಸಲಾಗಿದೆ ಎಂದು ಹೇಳಿದರು.