ಬೆಂಗಳೂರು: ಕಸದ ಬುಟ್ಟಿಯಲ್ಲಿದ್ದ 10 ವರ್ಷ ಹಳೆಯ ಜಾತಿಗಣತಿ ವರದಿಯನ್ನು ಈಗ ಸಲ್ಲಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವಿರುದ್ಧ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಆಕ್ರೋಶ ಹೊರ ಹಾಕಿದೆ. ಈ ಬಗ್ಗೆ ಬೀದಿಗಿಳಿದು ಹೋರಾಟ ಮಾಡೋಣ ಎಂದು ಸವಾಲು ಹಾಕಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ರಾಮಚಂದ್ರ, ಶಾಮನೂರು ಶಿವಶಂಕರಪ್ಪ ಹೆಸರು ಹೇಳದೆ, ಅವನೊಬ್ಬ ಶಾಸಕ ಮಾತಾಡಿದ್ದಾನೆ. ಅವನು ವಿಧಾನಸಭೆಯಲ್ಲೇ ಹಿರಿಯ ಶಾಸಕ. ಅವನು ಮಾತಾಡಿದ್ದು ನೋಡಿದ್ದೀರಾ? ಹಾಗದ್ರೆ , ಶೋಷಿತ ಸಮಾಜದವರು ಬೀದಿಗಿಳಿದು ಹೋರಾಟ ಮಾಡೋಣ ಬನ್ನಿ…, ನಾವು ಸಂಘರ್ಷಕ್ಕೆ ರೆಡಿ ಇದ್ದೇವೆ. ಅವರ, ನಾವಾ ನೋಡೆ ಬಿಡೋಣ ಎಂದು ಸವಾಲು ಹಾಕಿದರು.
ಈ ರೀತಿ ಮಾತನಾಡುವವರೇ ನಮಗೆ ಇಷ್ಟು ವರ್ಷ ಮೋಸ ಮಾಡಿಕೊಂಡು ಬಂದಿದ್ದಾರೆ. ಜಾತಿ ಜನಗಣತಿಗೆ ಯಾರು ವಿರೋಧ ಮಾಡುತ್ತಿದ್ದಾರೋ ಅವರು ಇದುವರೆಗೆ ನಾಡಿನ ಸಂಪತ್ತನ್ನು ಲೂಟಿ ಮಾಡಿಕೊಂಡೇ ಬಂದಿದ್ದಾರೆ.ವರದಿಯನ್ನು ಕ್ಯಾಬಿನೆಟ್ ನಲ್ಲಿ ಚರ್ಚೆಗೆ ಬಿಡಿ. ಒಂದು ವೇಳೆ ವರದಿ ಶಿಫಾರಸು ಅನುಷ್ಠಾನ ಆಗಿಲ್ಲ ಅಂದ್ರೆ ಬೀದಿ ಹೋರಾಟ ಮಾಡುತ್ತೇವೆ ಎಂದರು.
ರಾಜ್ಯದಲ್ಲಿ ನೇಮಕವಾದ ಹಿಂದುಳಿದ ಜಾತಿಗಳ ಎಲ್ಲ ವರದಿಯನ್ನು ವಿರೋಧ ಮಾಡಿಕೊಂಡು ಬಂದವರು. ಹಿಂದುಳಿದ ಜಾತಿಗಳಿಗೆ ರೂಪಿಸುವ ಕಾರ್ಯಕ್ರಮಕ್ಕೆ ದ್ರೋಹ ಮಾಡಿ ನಮ್ಮ ತಟ್ಟೆಯ ಅನ್ನ ಕಸಿದುಕೊಂಡು ತಿನ್ನುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.ಆ ಮೂರು ಜಾತಿಗಳ ಜನ ಇರುವುದು ಕೇವಲ 25 ರಿಂದ 30 ಪರ್ಸೆಂಟ್. ನಾವು 70% ಜನರು ಇದ್ದೇವೆ. ನಾಲ್ಕರಿಂದ ಐದು ಕೋಟಿ ಜನ ನಾವಿದ್ದೇವೆ. ಸಿಎಂ ಯಾರೇ ಆಗಿರಲಿ ಸರ್ಕಾರದ ವಿರುದ್ದ ನಾವು ಹೋರಾಟಕ್ಕೆ ರೆಡಿ ಇದ್ದೇವೆ. ನಾವು ಹೋರಾಟ ಮಾಡುತ್ತಿದ್ದೇವೆ. ನಾವೂ ಕೈಗೆ ಬಳೆ ತೊಟ್ಟುಕೊಂಡು ಕುಳಿತಿಲ್ಲ. ನಾವು ಸಹ ರೆಡಿ ಇದ್ದೇವೆ ಎಂದು ಎಂದರು.



