ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆಯ ಶಿವಮೊಗ್ಗ ವೃತ್ತದಲ್ಲಿ ಖಾಲಿ ಇರುವ 30 ಅರಣ್ಯ ವೀಕ್ಷಕರ ಗ್ರೂಪ್-ಡಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.ಅರಣ್ಯ ಇಲಾಖೆಯಿಂದ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದ್ದು, 2023-24ನೇ ಸಾಲಿನಲ್ಲಿ ಶಿವಮೊಗ್ಗ ಅರಣ್ಯ ವೃತ್ತದಲ್ಲಿ ಖಾಲಿ ಇರುವಂತ 30 ಅರಣ್ಯ ವೀಕ್ಷಕರ ಗ್ರೂಪ್-ಡಿ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲಿದೆ. ಅರಣ್ಯ ಇಲಾಖೆಯ ಅಧಿಕೃತ ವೆಬ್ ಸೈಟ್ https://aranya.gov.in ಜಾಲತಾಣಕ್ಕೆ ಭೇಟಿ ನೀಡಿ, ನೇಮಕಾತಿ ಶೀರ್ಷಿಕೆಯಡಿ ಅಧಿಸೂಚನೆ ನೋಡಬಹುದು.
ಅರ್ಜಿಗಳನ್ನು ಆನ್ ಲೈನ್ ಮೂಲಕ ಸಲ್ಲಿಸಬೇಕೆ ಹೊರತು, ಯಾವುದೇ ಇತರೆ ವಿಧಾನದಲ್ಲಿ ಸಲ್ಲಿಸುವಂತಿಲ್ಲ. ಅಧಿಸೂಚನೆಯಲ್ಲಿನ ಸೂಚನೆ, ನಿರ್ದೇಶನ ಹಾಗೂ ಷರತ್ತುಗಳನ್ನು ಓದಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ದಿನಾಂಕ 27-09-2023ರಿಂದ ಆರಂಭಗೊಂಡಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26-10-2023 ಆಗಿದೆ. ಅರ್ಜಿ ಶುಲ್ಕವನ್ನು ಪಾವತಿಸೋದಕ್ಕೆ ಕೊನೇ ದಿನಾಂಕ 31-10-2023 ಆಗಿರುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದವರಿಗೆ, 2ಎ, 2ಬಿ, 3ಎ, 3ಬಿ ಪ್ರವರ್ಗದ ಅಭ್ಯರ್ಥಿಗಳಿಗೆ ರೂ.200 ಅರ್ಜಿ ಶುಲ್ಕ ಮತ್ತು ರೂ.20 ಸೇವಾ ಶುಲ್ಕ ನಿಗದಿಪಡಿಸಲಾಗಿದೆ.ಎಸ್ಸಿ ಎಸ್ಟಿ ಮತ್ತು ಪ್ರವರ್ಗ-1ಕ್ಕೆ ರೂ.100 ಹಾಗೂ ಸೇವಾ ಶುಲ್ಕ ರೂ.20 ನಿಗದಿಪಡಿಸಲಾಗಿದೆ. ವೇತನ ಶ್ರೇಣಿ:ರೂ.18,600ರಿಂದ ರೂ.32,600 ಆಗಿದೆ.
- ವಿಭಾಗವಾರು ಹುದ್ದೆಗಳ ವಿವರ
- ಶಿವಮೊಗ್ಗ ಪ್ರಾದೇಶಿಕ ವಿಭಾಗ -8 ಹುದ್ದೆ
- ಭದ್ರಾವತಿ ಪ್ರಾದೇಶಿಕ ವಿಭಾಗ – 8 ಹುದ್ದೆ
- ಸಾಗರ ಪ್ರಾದೇಶಿಕ ವಿಭಾಗ -6 ಹುದ್ದೆ
- -ಶಿವಮೊಗ್ಗ ವನ್ಯಜೀವಿ ವಿಭಾಗ -8 ಹುದ್ದೆ
- ಒಟ್ಟು 30 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ
ಅರಣ್ಯ ವೀಕ್ಷಕರ ಗ್ರೂಪ್-ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಎಸ್ ಎಸ್ ಎಲ್ ಸಿ ಅಥವಾ ಎಸ್ ಎಸ್ ಎಲ್ ಸಿ ವಿದ್ಯಾರ್ಹತೆಯ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಇಂತಹ ಅಭ್ಯರ್ಥಿಗಳು ಅರ್ಜಿಯನ್ನು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಮೊದಲು ಹೊಂದಿರಬೇಕು.
ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 30 ವರ್ಷವಾಗಿದೆ. 2ಎ, 2ಬಿ, 3ಎ, 3ಬಿ ವರ್ಗದವರಿಗೆ 32 ವರ್ಷ. ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ 33 ವರ್ಷವಾಗಿದೆ. ಮಾಜಿ ಸೈನಿಕರಿಗೆ ಈ ಮೇಲಿನ ಯಾವ ವರ್ಗಕ್ಕೆ ಸೇರಿರುತ್ತಾರೋ ಈ ಮೇಲಿನ ಪ್ರವರ್ಗಕ್ಕೆ ನಿಗದಿಪಡಿಸಿದ ಗರಿಷ್ಠ ವಯೋಮಿತಿಗೆ ಅವರು ಎಷ್ಟು ವರ್ಷ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೋ ಅಷ್ಟು ವರ್ಷಗಳಿಗೆ ಮೂರು ವರ್ಷ ಸೇರಿಸಿದರೇ ಎಷ್ಟು ವರ್ಷಗಳಾಗುತ್ತೋ ಅಷ್ಟು ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ.
ಅರ್ಜಿಗಳಲ್ಲಿ ಅಭ್ಯರ್ಥಿಗಳು ಭರ್ತಿ ಮಾಡಿದ ಮಾಹಿತಿ, ವಿವರಗಳ ಆಧಾರದ ಅನ್ವಯ ಆಯ್ಕೆ ಪ್ರಾಧಿಕಾರವು ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ 1:20 ಅನುಪಾತದಲ್ಲಿ ದೈಹಿಕ ತಾಳ್ವಿಕೆ ಪರೀಕ್ಷೆ ಮತ್ತು ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಗೆ ಅರ್ಹತಾ ಪಟ್ಟಿ ಪ್ರಕಟಿಸಲಾಗುತ್ತದೆ. ದೈಹಿಕ ತಾತ್ವಿಕ ಪರೀಕ್ಷೆ ಮತ್ತು ದೈಹಿಕ ಸಮರ್ಥತೆ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಎಸ್‌ಎಸ್‌ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಪ್ರಕಟಿಸಲಾಗುತ್ತದೆ.