ಮಂಗಳೂರು: ವಿಶ್ವ ಆರೋಗ್ಯ ಸಂಸ್ಥೆ ಅಡಿಕೆ ಕ್ಯಾನ್ಸರ್ ಕಾರಕ ಎಂದು ಹೇಳಿದ ಬೆನ್ನಲ್ಲೇ ಕರ್ನಾಟಕ ಅಡಿಕೆ ಬೆಳೆಗಾರರಲ್ಲಿ ಆತಂಕ ಎದುರಾಗಿತ್ತು. ಈ ಆತಂಕ ನಿವಾರಿಸುವ ಉದ್ದೇಶದಿಂದ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಡಾ. ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಧರ್ಮಸ್ಥಳದಲ್ಲಿ ಮಹತ್ವದ ಸಭೆ ನಡೆಸಲಾಯಿತು.
ವಿಶ್ವ ಆರೋಗ್ಯ ಸಂಸ್ಥೆಯ ಸಭೆಗೆ ತೆರಳುವ ಭಾರತದ ಪ್ರತಿನಿಧಿಗಳಿಗೆ ಅಡಿಕೆಯ ಔಷಧಿಯ ಗುಣಗಳ ಮಾಹಿತಿ ನೀಡುವ ಜೊತೆಗೆ ಅಡಿಕೆಯ ಅಧ್ಯಯನ ಹಾಗೂ ಕೃಷಿಕರ ಬದುಕಿನ ಮಾಹಿತಿ ನೀಡುವ ವ್ಯವಸ್ಥೆ ಬಗ್ಗೆ ತೀರ್ಮಾನ ಕೈಹೊಳ್ಳಲಾಯಿತು.
ಅಡಿಕೆ ಹಾನಿಕಾರಕವಲ್ಲ ಎನ್ನುವ ಅಂಶ ಈಗಾಗಲೇ ಅಧ್ಯಯನದಿಂದ ಹೊರಬಂದಿದೆ. ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಹಾಗೂ ಜೆಡ್ಡು ಆಯುರ್ವೇದ ಸಂಸ್ಥೆ ಈ ಬಗ್ಗೆ ನಡೆಸಿರುವ ಅಧ್ಯಯನ ಅಂತರರಾಷ್ಟ್ರೀಯ ಜರ್ನಲ್ ನಲ್ಲೂ ಪ್ರಕಟವಾದ ಬಗ್ಗೆ ಸಭೆಯ ಚರ್ಚಿಸಲಾಯಿತು.
ಸಭೆಯಲ್ಲಿ ತೆಗೆದುಕೊಂಡ ಇತರೆ ನಿರ್ಣಯಗಳು
- ವಿದೇಶಿ ಅಡಿಕೆ ಆಮದು ತಡೆಯಬೇಕು
- ಅಡಿಕೆ ಗುಣಮಟ್ಟದ ಮಾಹಿತಿ ಅಗತ್ಯವ
- ಪ್ರತಿಷ್ಠಾನ ದಿಂದ 63ಕ್ಕೂ ಹೆಚ್ಚು ವಿದೇಶಿ ಅಡಕೆಯ ಸ್ಯಾಂಪಲ್ ಪರಿಶೀಲನೆ
- ಸುಸಜ್ಜಿತ ಪ್ರಯೋಗಾಲಯ ಸ್ಥಾಪನೆ
- ಅಡಿಕೆಗೆ ಹಾಕುವ ಶಾಯಿ, ಬಣ್ಣದ ಬಗ್ಗೆ ಇನ್ನಷ್ಟು ಅಧ್ಯಯನ ಸಭೆಯಲ್ಲಿ ಚರ್ಚೆ ನಡೆದಿದೆ.
- ಅಡಕೆ ಹಳದಿ ರೋಗ ಪೀಡಿತ ಪ್ರದೇಶದ ರೈತರಿಗೆ ನೆರವಾಗಲು ಸರ್ಕಾರದಿಂದ ಕ್ರಮ ಕೈಗೊಳ್ಳಬೇಕು
- ಪರ್ಯಾಯ ಬೆಳೆಗೆ ಪ್ರೋತ್ಸಾಹ ನೀಡಬೇಕು
- ಅಡಿಕೆಯ ವಿವಿಧ ಔಷಧಿ ಗುಣದ ಬಗ್ಗೆ ಅಧ್ಯಯನ ಅಗತ್ಯ
ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಟ್ರಸ್ಟಿಗಳಾದ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಅಡಕೆ ಮಹಾಮಂಡಲ ಅಧ್ಯಕ್ಷ ಆರಗ ಜ್ಞಾನೇಂದ್ರ, ಕ್ಯಾಂಪ್ಕೋ ನಿರ್ದೇಶಕ ಬಿ.ವಿ. ಸತ್ಯನಾರಾಯಣ, ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ತುಮ್ ಕೋಸ್ ಅಧ್ಯಕ್ಷ ಹೆಚ್.ಎಸ್. ಶಿವಕುಮಾರ್, ಅಡಿಕೆ ಕೃಷಿ ಸಂಶೋಧಕ ಬದನಾಜೆ ಶಂಕರಭಟ್, ಅಖಿಲ ಭಾರತ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್, ಪ್ರತಿಷ್ಠಾನದ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್. ಕೇಶವಭಟ್ ಇತರರು ಇದ್ದರು.



