ಬೆಂಗಳೂರು: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಆದೇಶದಂತೆ ಕರ್ನಾಟಕ ಸಾರಿಗೆ ಇಲಾಖೆಯಿಂದ ಎಲ್ಲಾ ವಾಹನಗಳಿಗೂ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್‌ಗಳು (HSRP) ಅಳವಡಿಕೆಗೆ ಆದೇಶ ಹೊರಡಿಸಿದೆ. ಏಪ್ರಿಲ್ 2019 ಕ್ಕಿಂತ ಮೊದಲು ನೋಂದಣಿ ಮಾಡಿಕೊಂಡ ಎಲ್ಲಾ ವಾಹನಗಳು ಎಚ್ ಎಸ್ ಆರ್ ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾಯವಾಗಿದೆ. ರಾಜ್ಯ ಸರ್ಕಾರ ಈಗಾಗಲೇ 3 ಬಾರಿ ಅವಧಿ ವಿಸ್ತರಣೆ ಮಾಡಿದ್ದು, 2024ರ ಮೇ 31ಕ್ಕೆ ಗಡುವು ನೀಡಲಾಗಿದೆ.
ಈ ಬಾರಿ ಅವಧಿ ವಿಸ್ತರಣೆ ಅನುಮಾನವಿದ್ದು, ಮೇ 31ರ ನಂತರ ಎಚ್ ಎಸ್ ಆರ್ ನಂಬರ್ ಪ್ಲೇಟ್ ಅಳವಡಿಸದ ವಾಹನಗಳಿಗೆ ದಂಡ ಫಿಕ್ಸ್ ಎನ್ನಲಾಗಿದೆ. ಸರ್ಕಾರ ಅವಧಿ ವಿಸ್ತರಣೆಗೆ ಸರ್ಕಾರ ನಿರಾಸಕ್ತಿ ತೋರಿದ್ದು, ಜೂನ್ ತಿಂಗಳಿಂದ ದಂಡ ವಸೂಲಿ ಮಾಡಲು ನಿರ್ಧರಿಸಿದೆ.ರಾಜ್ಯದ ವಾಹನ ಸವಾರರು ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಆಳವಡಿಕೆಗೆ ಆಸಕ್ತಿ ತೋರಿಸುತ್ತಿಲ್ಲ. ಏಪ್ರಿಲ್ 2019 ಕ್ಕಿಂತ ಮೊದಲು ರಾಜ್ಯದಲ್ಲಿ ನೋಂದಣಿ ಮಾಡಿಕೊಂಡ ಎಲ್ಲಾ ದ್ವಿಚಕ್ರ, ತ್ರಿಚಕ್ರ ವಾಹನಗಳು, ಕಾರುಗಳು, ಲಘು, ಮಧ್ಯಮ ಮತ್ತು ಭಾರಿ ವಾಹನಗಳಿಗೆ ಈ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡುವುದು ಕಡ್ಡಾಯವಾಗಿದೆ.
ರಾಜ್ಯದಲ್ಲಿ ಇದುವರೆಗೆ 34 ಲಕ್ಷ ವಾಹನಗಳಿಗೆ ಮಾತ್ರ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಆಳವಡಿಕೆ ಮಾಡಲಾಗಿದೆ. ಈಗ ಮೇ 31 ರೊಳಗೆ ಎಲ್ಲಾ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯವಾಗಿದ್ದ, 20 ದಿನವಷ್ಟೇ ಬಾಕಿಯಿದೆ. ಇನ್ನೂ 1.56 ಕೋಟಿ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಬಾಕಿಯಿದೆ.ಸಾರಿಗೆ ಇಲಾಖೆ 3 ಬಾರಿ ಅವಧಿ ವಿಸ್ತರಣೆ ಮಾಡಿದ್ದರೂ ವಾಹನ ಸವಾರರು ಆಸಕ್ತಿ ತೋರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ನಿರ್ಲಕ್ಷ್ಯ ತೋರಿದ ವಾಹನ ಸವಾರರಿಗೆ ಜೂ.1 ರಿಂದ ದಂಡ ಹಾಕಲು ಮುಂದಾಗಿದೆ.
ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳದ ವಾಹನ ಸವಾರರಿಗೆ ಮೊದಲು ಬಾರಿಗೆ 500 ರೂ. ದಂಡ, ಎರಡನೇ ಬಾರಿ ಸಿಕ್ಕಿ ಬಿದ್ದರೆ 1,000 ರೂ. ದಂಡ ವಿಧಿಸಲು ತೀರ್ಮಾನ ಕೈಗೊಂಡಿದೆ. ಈ ಮೊದಲು 2023ರ ನವೆಂಬರ್ ತಿಂಗಳ 17ಕ್ಕೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ನೀಡಿತ್ತು. ಆದರೆ, ವಾಹನ ಸವಾರರು ನಿರಾಸಕ್ತಿ ತೋರಿದ ಕಾರಣ 2024ರ ಫೆಬ್ರವರಿ 17ವರೆಗೆ ವಿಸ್ತರಣೆ ಮಾಡಲಾಗಿತ್ತು. ಆದರೂ, ಶೇ.30ರಷ್ಟು ವಾಹನ ಸವಾರರೂ ಕೂಡ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಂಡಿರಲಿಲ್ಲ. ಹೀಗಾಗಿ, ವಾಹನ ಸವಾರರ ಮನವಿ ಮತ್ತು ಹೊತದೃಷ್ಟಿಯಿಂದ ಮೇ 31ವರೆಗೂ ಅವಧಿ ವಿಸ್ತರಣೆ ಮಾಡಲಾಗಿದೆ
ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಆನ್ ಲೈನ್ ಬುಕ್ಕಿಂಗ್ ಹೇಗೆ..?: ಗೂಗಲ್ ನಲ್ಲಿ https://transport.karnataka.gov.in ಅಥವಾ www.siam.in ಪೋರ್ಟಲ್ ಮೂಲಕ ಲಾಗಿನ್ ಆಗಬೇಕು. ಅಲ್ಲಿ Book HSRP ಕ್ಲಿಕ್ ಮಾಡಿ. ನಂತರ ನಿಮ್ಮ ವಾಹನ ತಯಾರಕ ಕಂಪನಿ ಆಯ್ಕೆ ಮಾಡಿಕೊಳ್ಳಿ ಇದಾದ ಬಳಿಕ ನಿಮ್ಮ ವಾಹನದ ಮಾಹಿತಿಯನ್ನು ನಮೂದಿಸಿಕೊಳ್ಳಿ, ನಂತರ ನಿಮ್ಮ ಹತ್ತಿರದ ಅಥವಾ ನಿಮ್ಮ ಡೀಲರ್ ಶೋ ರೂಂ ಆಯ್ಕೆ ಮಾಡಿಕೊಂಡು ಆನ್ ಲೈನ್ ನಲ್ಲಿಯೇ ಹಣ ಪಾವತಿಸಿ, ನಿಮ್ಮ ಅನುಕೂಲಕ್ಕೆ ತಕ್ಕಂತೆ ದಿನಾಂಕ ನಿಗದಿ ಮಾಡಿಕೊಳ್ಳಬಹುದು.