ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿ ಭಾರತೀಯರ ಪಾಲಿಗೆ ಆಘಾತಕಾರಿ ಸುದ್ದಿ ಹೊರ ಬಿದ್ದಿದೆ. ಇಂದು ಬೆಳಗ್ಗೆ ಕಾರ್ಕಿವ್‌ನಲ್ಲಿ ನಡೆದ ರಷ್ಯಾದ ಶೆಲ್ ದಾಳಿಗೆ ಭಾರತೀಯ ವೈದ್ಯಕೀಯ ವಿದ್ಯಾರ್ಥಿ ಬಲಿಯಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ದೃಢಪಡಿಸಿದೆ. ಮೃತ ವಿದ್ಯಾರ್ಥಿ ಹಾವೇರಿ ಜಿಲ್ಲೆಯ ನವೀನ್ (21) ವೈದ್ಯಕೀಯ ವಿದ್ಯಾರ್ಥಿಯಾಗಿದ್ದು, ರಾಜ್ಯದ ಪಾಲಿಗೆ ಅತ್ಯಂತ ದುಃಖದ ಸಂಗತಿಯಾಗಿದೆ.
ಸಿಎಂ ಬೊಮ್ಮಾಯಿ ಸಾಂತ್ವನ;ಉಕ್ರೇನ್ ನಲ್ಲಿ ಸಾವನ್ನಪ್ಪಿದ ಹಾವೇರಿ ಜಿಲ್ಲೆಯ ವೈದ್ಯಕೀಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಅವರ ತಂದೆ ಶೇಖರಗೌಡ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಇದೊಂದು ದೊಡ್ಡ ದುರಂತ. ದೇವರು ನವೀನ್ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ. ನೀವು ಧೈರ್ಯದಿಂದಿರಿ, ನವೀನ್ ಅವರ ಮೃತದೇಹವನ್ನು ಭಾರತಕ್ಕೆ ತರಿಸಿಕೊಳ್ಳುವ ಎಲ್ಲ ಪ್ರಯತ್ನ ನಡೆದಿದೆ. ಈ ಸಂಬಂಧ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಸಿಎಂ ಸಾಂತ್ವನ ಹೇಳಿದ್ದಾರೆ.
ತಂದೆ ಶೇಖರಗೌಡ ಮಾತನಾಡಿ, ಇಂದು ಮುಂಜಾನೆ ಮಗ ದೂರವಾಣಿ ಕರೆ ಮಾಡಿದ್ದ. ಪ್ರತಿ ದಿನ ಎರಡು ಮೂರು ಬಾರಿ ದೂರವಾಣಿ ಮೂಲಕ ಮಾತಾಡುತ್ತಿದ್ದ ಎಂದಿದ್ದಾರೆ.