ಬೆಂಗಳೂರು; ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಫ್ರೀ ಪಡೆಯುವ ಗೃಹ ಜ್ಯೋತಿ ಯೋಜನೆಗೆ ಆನ್‌ಲೈನ್ ಮೂಲಕ ನೋಂದಣಿ ಪ್ರಕ್ರಿಯೆ ಜೂನ್ 18ರಂದು ಆರಂಭಗೊಂಡಿದೆ. ಆದರೆ, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಸೇವಾಸಿಂಧು ವೆಬ್ ಸೈಟ್ ಸರ್ವರ್ ಸಮಸ್ಯೆ ಎದುರಾಗಿದೆ.
ಇದೀಗ ಸರ್ಕಾರ ಅರ್ಜಿ ಸಲ್ಲಿಸಲು ಸೇವಾಸಿಂಧು ವೆಬ್ ಸೈಟ್ ನ ಹೊಸ ಲಿಂಕ್ ಸೃಷ್ಟಿಸಿದ್ದು, ಈ ಲಿಂಕ್ https://sevasindhugs.karnataka.gov.in/?utm_source=DH-MoreFromPub&utm_medium=DH-app&utm_campaign=DH ಅರ್ಜಿ ಸಲ್ಲಿಕೆ ಇನ್ನಷ್ಟು ಸುಲಭವಾಗಿದೆ. ಆನ್‌ಲೈನ್ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಜೂನ್ 21ರಂದು ಸಂಜೆ 7 ಗಂಟೆಯ ವೇಳೆಗೆ 12.51 ಲಕ್ಷ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ.
ಸರ್ವರ್ ಸಮಸ್ಯೆಯನ್ನು ಸರಿ ಮಾಡಲು ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಸದ್ಯ ಗೃಹ ಜ್ಯೋತಿಗೆ ನೋಂದಣಿ ಮಾಡಿಕೊಳ್ಳಲು ಹೊಸ ಲಿಂಕ್ ಬಿಡುಗಡೆ ಮಾಡಿದ್ದು, ಈಗ ಸುಲಭವಾಗಿ ನೋಂದಣಿ ಮಾಡಿಕೊಳ್ಳಬಹುದು.ನಿಮ್ಮ ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್ ಮೂಲಕ ನೀವೇ ನೋಂದಣಿ ಮಾಡಿಕೊಳ್ಳಬಹುದು ಅಥವಾ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಕೂಡ ಅರ್ಜಿ ನೋಂದಣಿ ನಡೆಯುತ್ತಿದೆ.
ವಿದ್ಯುತ್ ಕಚೇರಿಗಳಲ್ಲಿ ಕೂಡ ಸಮಸ್ಯೆ ಇಲ್ಲದೆ ಅರ್ಜಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಅರ್ಜಿ ನೋಂದಣಿಗೆ ಯಾವುದೇ ಕೊನೆಯ ದಿನಾಂಕ ಇರುವುದಿಲ್ಲ, ಗ್ರಾಹಕರು ಆತಂಕಕ್ಕೆ ಒಳಗಾಗದೆ ಅರ್ಜಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.



