ಬೆಳಗಾವಿ: ರಾಜ್ಯದಲ್ಲಿ ಒಟ್ಟು 63.32 ಲಕ್ಷ ಎಕರೆ ಸರಕಾರಿ ಜಮೀನಿದ್ದು, 14.72 ಲಕ್ಷ ಎಕರೆ ಜಮೀನು ಒತ್ತುವರಿಯಾಗಿದೆ. ಅತಿಕ್ರಮಣ ಪತ್ತೆಗೆ ಆ್ಯಪ್ ಬಳಕೆ ಮಾಡಿ, ಒತ್ತುವರಿ ತೆರವುಗೊಳಿಸಲು ಅಭಿಯಾನ ನಡೆಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ವಿವಿಧ ನ್ಯಾಯಾಲಯಗಳಲ್ಲಿರುವ ಪ್ರಕರಣಗಳು, ಅಕ್ರಮ-ಸಕ್ರಮ ಯೋಜನೆ ಮತ್ತು ಸಾರ್ವಜನಿಕ ಉದ್ದೇಶಗಳಿಗೆ ಬಳಕೆಯಾಗಿರುವ 10.82 ಎಕರೆ ಜಮೀನು ಹೊರತುಪಡಿಸಿ ಉಳಿದ 3.89 ಲಕ್ಷ ಎಕರೆ ಭೂಮಿಯನ್ನು ಒತ್ತುವರಿಯಿಂದ ತೆರವುಗೊಳಿಸಬೇಕಿದೆ ಎಂದರು.
ವಿಧಾನಪರಿಷತ್‌ನಲ್ಲಿ ವೈ.ಎ. ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿ, ಒತ್ತುವರಿಯಾಗಿರುವ 3.89 ಲಕ್ಷ ಎಕರೆ ಭೂಮಿಯಲ್ಲಿ 2.73 ಲಕ್ಷ ಎಕರೆ ಜಮೀನನ್ನು ತೆರವುಗೊಳಿಸಲಾಗಿದೆ.ಉಳಿದ ಭೂಮಿ ಒತ್ತುವರಿ ತೆರವು ಕಾರ್ಯ ಪ್ರಗತಿಯಲ್ಲಿದೆ.ಅತಿಕ್ರಮಣವನ್ನು ತೆರವು ಗೊಳಿಸಲು ಅಭಿಯಾನದ ರೀತಿಯಲ್ಲಿ ಆಯಪ್ ಒಂದನ್ನು ಆರಂಭಿಸಲಾಗಿದ್ದು ಇದು ಜನವರಿಯಿಂದ ಕಾರ್ಯಾರಂಭ ಮಾಡಲಿದೆ. ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಹೋಗಿ ಒತ್ತುವರಿಯಾಗಿರುವ ಬಗ್ಗೆ ಪರಿಶೀಲನೆ ಮಾಡಿ ತಹಶೀಲ್ದಾರರಿಗೆ ವರದಿ ಕೊಡಬೇಕು. ಅನಂತರ ಅದನ್ನು ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.



