ಬೆಂಗಳೂರು: ರಾಜ್ಯದಲ್ಲಿ ಫೆ. 20ರಂದು 227 ಹಳ್ಳಿಗಳಲ್ಲಿ `ಹಳ್ಳಿ ಕಡೆ ನಡೆಯಿರಿ’ ಕಾರ್ಯಕ್ರಮ ನಡೆಯಲಿದೆ. ತಹಶೀಲ್ದಾರ್, ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ಭೇಟಿ ನೀಡಿ ಜನರ ಕಷ್ಟ ಆಲಿಸಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಲಾಗಿದ್ದು, ಜನರ ಮನೆ ಬಾಗಿಲಿಗೆ ಇಲಾಖೆ ಕರೆದೊಯ್ಯುವ ನಿಟ್ಟಿನಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರ ಹಳ್ಳಿಯಲ್ಲಿ 24 ಗಂಟೆ ಇರಬೇಕು. ಈ ವೇಳೆ ವೃದ್ಧಾಪ್ಯ ವೇತನ, ಖಾತೆ, ಪಹಣಿ, ಪಿಂಚಣಿ, ಅಂಗವಿಕಲರ ಸಮಸ್ಯೆಗಳನ್ನ ಪರಿಹರಿಸಲು ಸ್ಥಳದಲ್ಲೇ ಜಿಲ್ಲಾಧಿಕಾರಿಗಳು ಆದೇಶ ಮಾಡಲಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕು ಹೊಸಹಳ್ಳಿ ಗ್ರಾಮದಲ್ಲಿ ನಾನು ಗ್ರಾಮ ವಾಸ್ತವ್ಯ ಮಾಡುತ್ತೇನೆ. ಆ ಊರಿನ ಹಾಸ್ಟೆಲ್ ನಲ್ಲಿ ರಾತ್ರಿ ಕಳೆಯುತ್ತೇನೆ. ದಿನವಿಡೀ ಗ್ರಾಮದಲ್ಲಿಯೇ ಇದ್ದು ಜನರ ಸಮಸ್ಯೆ ಆಲಿಸುತ್ತೇನೆ ಎಂದು ತಂದು ತಿಳಿಸಿದರು.