ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಗೆ ಇಂದು (ಜುಲೈ 19) ವಿಧಾನಸಭೆಯ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಚಾಲನೆ ನೀಡಿದರು. ಕುಟುಂಬದ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2000 ರೂ. ಜಮಾ ಮಾಡುವ ಈ ಯೋಜನೆಗೆ ಅರ್ಜಿ ಸ್ವೀಕಾರ ಕಾರ್ಯ ಗುರುವಾರದಿಂದ ಆರಂಭವಾಗಲಿದೆ. ರಾಜ್ಯದಲ್ಲಿ 1.28 ಕೋಟಿ ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆಯ ಲಾಭ ಸಿಗಲಿದೆ.ರಾಜ್ಯದಲ್ಲಿ 1.28 ಕೋಟಿ ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಬಹುದಾಗಿದೆ.
ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಒಬ್ಬ ಮಹಿಳೆಗೆ 2000 ರೂ. ನೀಡುವುದಿಂದ ಆಗಬಹುದಾದ ಪರಿವರ್ತನೆಗಳು, ಕುಟುಂಬಕ್ಕೆ ಆಗಬಹುದಾದ ಅನುಕೂಲದ ಬಗ್ಗೆ ಮಾತನಾಡಿದರು. ಇಂಥಹುದೊಂದು ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿರುವ ಮುಖ್ಯಮಂತ್ರಿಗಳಿಗೆ, ಸರ್ಕಾರಕ್ಕೆ ಇಡೀ ಮಹಿಳಾ ಕುಲದ ಆಶೀರ್ವಾದವಿರಲಿದೆ. ಇದರಿಂದ ಸರ್ಕಾರದ ಪಾಲಿಗೆ ಪುಣ್ಯ ಸಂಚಯನವಾಗಲಿದೆ ಎಂದು ಹೇಳಿದರು.
ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುವ ಪ್ರಕ್ರಿಯೆ ಜುಲೈ 20ರಿಂದ ಆರಂಭವಾಗಲಿದೆ. ಗುರುವಾರ ಬೆಳಗ್ಗೆ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಎಲ್ಲ ಗ್ರಾಮ ಒನ್, ಬಾಪೂಜಿ ಕೇಂದ್ರ, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಆರಂಭವಾಗಲಿದೆ. ಹಾಗಿದ್ದರೆ ಅರ್ಜಿ ಸಲ್ಲಿಸುವುದು ಹೇಗೆ?, ಯಾರು ಅರ್ಹರು ಎಂಬ ಮಾಹಿತಿ ಇಲ್ಲಿದೆ.
- ರಾಜ್ಯಾದ್ಯಂತ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸ್ವೀಕರಿಸಲು ಅನುಮತಿ ನೀಡಲಾಗಿದೆ. ಈ ಕೇಂದ್ರಗಳಿಗೆ ತೆರಳಿ ನೀವು ಅರ್ಜಿ ನೋಂದಣಿ ಮಾಡಿಕೊಳ್ಳಬಹುದು. ಆದರೆ, ನಮ್ಮ ಮನಸ್ಸಿಗೆ ಬಂದ ದಿನ, ನನಗೆ ಇವತ್ತು ರಜೆ ಇದೆ ಹೋಗುತ್ತೇನೆ ಎಂದು ಹೊರಟರೆ ಆಗುವುದಿಲ್ಲ.
- ಮೊದಲು ತಮ್ಮ ಮೊಬೈಲ್‌ನಿಂದ ಪಡಿತರ ಕಾರ್ಡ್ ನಂಬರ್ ಸಹಿತ ಸಹಾಯವಾಣಿಗೆ ಮೆಸೇಜ್ ಕಳುಹಿಸಬೇಕು. ಮೊಬೈಲ್ ಸಂಖ್ಯೆ: 8147500500ಗೆ ಎಸ್‌ಎಂಎಸ್ ಮಾಡಿದಾಗ ಯಾವ ದಿನ, ಯಾವ ಸಮಯ, ಯಾವ ಕೇಂದ್ರಕ್ಕೆ ಬರಬೇಕು ಎಂಬ ಸಂದೇಶ ಬರುತ್ತದೆ.
- ಯಾವ ಕೇಂದ್ರ, ಯಾವ ದಿನ, ಯಾವ ಸಮಯಕ್ಕೆ ನೋಂದಣಿಗೆ ಅವಕಾಶ ಎಂದು ತಿಳಿದ ಮೇಲೆ ಆ ಸಮಯಕ್ಕೆ ಸರಿಯಾಗಿ ಅಲ್ಲಿ ಹಾಜರಿರಬೇಕು. ಒಂದು ಕೇಂದ್ರದಲ್ಲಿ ಬೆಳಗ್ಗೆ 30 ಮಂದಿ, ಮಧ್ಯಾಹ್ನದ ನಂತರ 30 ಮಂದಿ ಅರ್ಜಿ ಸಲ್ಲಿಸಲು ಅವಕಾಶವಿದೆ.
- ಯಾವುದೇ ಕಾರಣಕ್ಕೂ ಸರ್ವರ್ ಮೇಲೆ ಒತ್ತಡ ಆಗಬಾರದು, ಕೇಂದ್ರಗಳ ಮೇಲೆ ಒತ್ತಡ ಆಗಬಾರದು ಎಂಬ ಕಾರಣಕ್ಕೆ ಈ ವ್ಯವಸ್ಥೆ ಮಾಡಲಾಗಿದೆ. ನೀವು ಬೆಳಗ್ಗೆ ಐದು ಗಂಟೆ, ಆರು ಗಂಟೆಗೆ ಎದ್ದು ಹೋಗಿ ಕ್ಯೂ ನಿಲ್ಲುವ ಪ್ರಮೇಯವೂ ಇರುವುದಿಲ್ಲ.
- ಒಂದು ವೇಳೆ ನಿಮಗೆ ನಿಗದಿ ಮಾಡಿದ ಸಮಯದಲ್ಲಿ ಅರ್ಜಿ ಸಲ್ಲಿಸಲು ವಿಫಲವಾದರೆ ಅಲ್ಲಿ ಹೋಗಿ ಸಿಬ್ಬಂದಿ ಮೇಲೆ ಒತ್ತಡ ಹಾಕುವಂತಿಲ್ಲ. ಟೈಮ್ ಮಿಸ್ ಮಾಡಿಕೊಂಡವರಿಗೆ ಅದೇ ದಿನ ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ನೋಂದಣಿಗೆ ಅವಕಾಶ ಇರುತ್ತದೆ
ಯಾರು ಅರ್ಜಿ ಸಲ್ಲಿಸಬಹುದು?
- ಬಿಪಿಎಲ್, ಎಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ಹೊಂದಿರುವವರು ಹಣ ಪಡೆಯಲು ಅರ್ಜಿ ಸಲ್ಲಿಸಬಹುದು.ಆದರೆ ಅರ್ಜಿ ಸಲ್ಲಿಸುವವರು ಅಥವಾ ಅವರ ಪತಿ ಆದಾಯ ತೆರಿಗೆ ಪಾವತಿ ಮಾಡುತ್ತಿರಬಾರದು, ಜಿಎಸ್‌ಟಿ ಕಟ್ಟುವವರೂ ಆಗಿರಬಾರದು. ತಾವು ಆದಾಯ ತೆರಿಗೆ/ಜಿಎಸ್‌ಟಿ ಕಟ್ಟುತ್ತಿಲ್ಲ ಎಂದು ಘೋಷಣೆ ಮಾಡಬೇಕಾಗುತ್ತದೆ.
- ನೀವು ಅರ್ಜಿ ಸಲ್ಲಿಸಲು ಹೋಗುವಾಗ ಪಡಿತರ ಚೀಟಿ, ಆಧಾರ್ ಕಾರ್ಡ್ (ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು), ಆಧಾರ್ ನಂಬರ್‌ಗೆ ಲಿಂಕ್ ಆಗಿರುವ ಮೊಬೈಲ್‌ನ್ನು ಹಿಡಿದುಕೊಂಡು ಹೋಗಬಹುದು.
- ಒಂದು ವೇಳೆ ಆಧಾರ್ ಲಿಂಕ್ ಆಗಿರದ ಖಾತೆಗೆ ಹಣ ಬರಬೇಕು ಎಂದರೆ ಬೇರೆ ಪಾಸ್‌ಬುಕ್ ಕೂಡಾ ಕೊಡಬಹುದು. (ಆ ಪಾಸ್‌ಬುಕ್ ಅನ್ನು ಸಾಫ್ಟ್‌ವೇರ್ ನಲ್ಲಿ ಅಪ್ ಲೋಡ್ ಮಾಡಿದ ಬಳಿಕ ಅದು ಸಿಡಿಪಿಒ, ತಹಶೀಲ್ದಾರ್, ತಾಲೂಕ್ ಪಂಚಾಯತ್ ಇಒಗಳ ಲಾಗಿನ್‌ಗೆ ಮಾಹಿತಿ ಹೋಗಲಿದ್ದು, ಈ ಪಾಸ್‌ಬುಕ್ ಪಡಿತರ ಚೀಟಿಯಲ್ಲಿರುವ ಮನೆಯ ಮುಖ್ಯಸ್ಥೆಯ ಜೊತೆ ಹೊಂದಾಣಿಕೆಯಾದರೆ ಅಲ್ಲಿ ಆರ್ಡರ್ ಕಾಪಿ ಕೊಡಲಾಗುವುದು. ಸಿಡಿಪಿಒ ಅಥವಾ ಅಂಗನವಾಡಿ ಕಾರ್ಯಕರ್ತೆಯರ ಮುಖಾಂತರ ತಲುಪಿಸಲಾಗುವುದು).
- ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಲು ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್, ಬಾಪೂಜಿ ಸೇವಾ ಕೇಂದ್ರಗಳಿಗೆ ಹೋಗುವುದು ಒಂದು ವಿಧಾನವಾದರೆ ಎರಡನೆಯರು ಪ್ರಜಾಪ್ರತಿನಿಧಿಗಳು ನೇರವಾಗಿ ನಿಮ್ಮ ಮನೆಗೆ ಬಂದು ನೋಂದಣಿ ಮಾಡಿಕೊಳ್ಳುವುದು.
- ಫಲಾನುಭವಿಗಳ ಅರ್ಜಿ ನೋಂದಣಿ ಪ್ರಕ್ರಿಯೆ ಸುಲಭವಾಗಿಸಲು ಪ್ರಜಾಪ್ರತಿನಿಧಿ ಎಂದು ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂಸೇವಕರನ್ನು ನೇಮಕ ಮಾಡಲಾಗುತ್ತದೆ. 1000 ಜನಸಂಖ್ಯೆ ಇದ್ದಾಗ ಇಬ್ಬರು (ಒಬ್ಬರು ಮಹಿಳೆ, ಒಬ್ಬರು ಪುರುಷ) ನೇಮಕ ಮಾಡಲಾಗುತ್ತದೆ. ಮನೆ ಬಾಗಿಲಿಗೆ ತೆರಳಿ ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಾಹಿತಿ ನೀಡಲಿದ್ದು, ನೋಂದಣಿ ಪ್ರಕ್ರಿಯೆಗೆ ಸಹಾಯ ಮಾಡಲಿದ್ದಾರೆ. ಇದು ಗ್ರಾಮ ಒನ್ ಕೇಂದ್ರಗಳಿಂದ ದೂರ ಇರುವ, ಕೇಂದ್ರಗಳಿಗೆ ಬರಲಾಗದವರಿಗೆ ಸಹಾಯ ಮಾಡಲು ಇರುವ ವ್ಯವಸ್ಥೆ.
- ನೀವು ಗ್ರಾಮ ಒನ್, ಬಾಪೂಜಿ ಕೇಂದ್ರ, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡರೆ ಕೂಡಲೇ ಮಂಜೂರಾತಿ ಪತ್ರವನ್ನು ನೀಡಲಾಗುತ್ತದೆ. ಜತೆಗೆ ತಕ್ಷಣವೇ ಮೊಬೈಲ್‌ಗೆ ಸಂದೇಶ ಬರುತ್ತದೆ.
ಪ್ರಜಾಪ್ರತಿನಿಧಿ ಮೂಲಕ ನೋಂದಾಯಿಸಿಕೊಂಡರೆ ಮಂಜೂರಾತಿ ಪತ್ರವನ್ನು ನಂತರ ಮನೆಗೆ ಕಳುಹಿಸಲಾಗುತ್ತದೆ.
- ಒಂದೊಮ್ಮೆ ಕೇಂದ್ರಗಳಿಗೆ ಹೋಗಿ ಅರ್ಜಿ ನೀಡಿದ್ದರೂ, ಆಧಾರ್‌ಗೆ ಲಿಂಕ್ ಆಗದ ಬೇರೆ ಖಾತೆಗೆ ಹಣ ಹಾಕಬೇಕು ಎಂದಾದಲ್ಲಿ ಅದರ ಪರಿಶೀಲನೆ ಕಾರ್ಯ ತಾಲೂಕು ಮಟ್ಟದಲ್ಲಿ ನಡೆಯಬೇಕು. ಹೀಗಾಗಿ, ಮಂಜೂರಾತಿ ಸಿಡಿಪಿಒ ಅಥವಾ ಅಂಗನವಾಡಿ ಕಾರ್ಯಕರ್ತೆಯರ ಮುಖಾಂತರ ಮನೆಗೆ ತಲುಪಿಸಲಾಗುತ್ತದೆ.ನೀವು ಯಾರಿಗೂ ಒಂದು ರೂಪಾಯಿ ಕೊಡಬೇಕಾಗಿಲ್ಲ
- ಈ ಯೋಜನೆಯ ಫಲಾನುಭವಿಗಳು ಅರ್ಜಿ ಸಲ್ಲಿಕೆ ವೇಳೆ ಯಾವುದೇ ಶುಲ್ಕವನ್ನು ಪಾವತಿಸಬಾರದು. ಈ ನೋಂದಣಿ ಪ್ರಕ್ರಿಯೆ ಸಂಪೂರ್ಣ ಉಚಿತ. ಅರ್ಜಿ ಸಲ್ಲಿಸಲು ಯಾರಾದರೂ ಹಣ ಕೇಳಿದರೆ ಸಿಡಿಪಿಒಗಳ ಗಮನಕ್ಕೆ ತರುವಂತೆ ಕೋರಲಾಗಿದೆ.
- ನೀವು ಯಾವಾಗ, ಎಲ್ಲಿ, ಯಾವ ಸಮಯಕ್ಕೆ ನೋಂದಣಿ ಮಾಡಿಕೊಳ್ಳಬೇಕು ಎಂಬ ಬಗ್ಗೆ ನಿಮ್ಮ ಮೊಬೈಲ್‌ಗೆ ಸಂದೇಶ ಕಳುಹಿಸಲಾಗುತ್ತದೆ. ಒಂದು ವೇಳೆ ನಿಮಗೆ ಸಂದೇಶ ಬಾರದೆ ಇದ್ದರೆ ನೀವು 1092ಕ್ಕೆ ಕಾಲ್ ಮಾಡಿ ಇಲ್ಲವೇ 8147500500 ನಂಬರ್‌ಗೆ SMS ಮಾಡಿ ಮಾಹಿತಿಯನ್ನು ಪಡೆಯಬಹುದು.
- ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ಏನೇ ಗೊಂದಲವಿದ್ದರೂ ಸಹಾಯವಾಣಿ ಸಂಖ್ಯೆ 1902ಗೆ ಕರೆ ಮಾಡಿ ಗೊಂದಲ ಬಗೆಹರಿಸಿಕೊಳ್ಳಬಹುದು. ಅಥವಾ ಮೊಬೈಲ್ ಸಂಖ್ಯೆ: 8147500500ಗೆ ಎಸ್‌ಎಂಎಸ್ ಮಾಡಬಹುದು.