ಬೆಂಗಳೂರು; ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಅಕ್ರಮ-ಸಕ್ರಮ ಯೋಜನೆ ಜಾರಿ ಸಾಧ್ಯವಿಲ್ಲ. ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದ್ದು, ಇನ್ನು ಮುಂದೆ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ. ಬಿಬಿಎಂಪಿ ಹೊರತುಪಡಿಸಿ ರಾಜ್ಯದ ಇತರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಅಕ್ರಮ ಬಡಾವಣೆ ಮತ್ತು ನಕ್ಷೆ ಮಂಜೂರಾತಿ ಇಲ್ಲದೆ ನಿರ್ಮಾಣಗೊಂಡಿರುವ ಕಟ್ಟಡಗಳ ಮಾಲೀಕರಿಂದ ನಿರ್ವಹಣಾ ಶುಲ್ಕ ರೂಪದಲ್ಲಿ ತೆರಿಗೆ ವಸೂಲಿ ಮಾಡುವ ಸಂಬಂಧ ಸರ್ಕಾರಕ್ಕೆ ಶಿಫಾರಸು ಮಾಡಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧ್ಯಕ್ಷತೆಯ ಸಚಿವ ಸಂಪುಟ ಉಪಸಮಿತಿ ಚಿಂತನೆ ನಡೆಸಿದೆ.
ಹಲವು ವರ್ಷಗಳಿಂದ ಅಕ್ರಮವಾಗಿ ನಿರ್ಮಾಣವಾಗಿರುವ ವಸತಿ ಕಟ್ಟಡಗಳಿಗೆ ದಂಡ ವಿಧಿಸಿ ಸಕ್ರಮ ಮಾಡಿಕೊಡುವ ಬಗ್ಗೆ ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡುವ ಕೆಲಸ ಆಗಬೇಕಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ವಿವರಿಸಿದರು.ಬಿಬಿಎಂಪಿ ಕಾಯ್ದೆ 2020ರ ಕಲಂ 144(6) ಮತ್ತು (21)ರ ಅಂಶಗಳನ್ನು ರಾಜ್ಯದ ಇತರ ಮಹಾನಗರ ಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ವಿಸ್ತರಿಸಲು ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆ 1976 (ಕೆಎಂಸಿ ಕಾಯ್ದೆ) ಹಾಗೂ ಕರ್ನಾಟಕ ಪುರಸಭೆ ಕಾಯ್ದೆ 1964ಕ್ಕೂ ಅಳವಡಿಕೆಯಿಂದಾಗುವ ಸಾಧಕ-ಬಾಧಕ ಪರಿಶೀಲಿಸಲು ರಚಿಸಿರುವ ಸಚಿವ ಸಂಪುಟ ಉಪಸಮಿತಿಯ ಮೊದಲ ಸಭೆಯಲ್ಲಿ ತೀರ್ಮಾನಿದಲಾಯಿತು.
ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ 54.91 ಲಕ್ಷಕ್ಕೂ ಹೆಚ್ಚಿನ ಆಸ್ತಿಗಳಿದ್ದು, ಅವುಗಳಲ್ಲಿ 20.55 ಲಕ್ಷ ಆಸ್ತಿಗಳು ಮಾತ್ರ ನಿಯಮದಂತೆ ಅನುಮತಿ ಪಡೆದು ಕಟ್ಟಡ ನಿರ್ಮಿಸಿ ತೆರಿಗೆ ಪಾವತಿಸುತ್ತಿವೆ. ಉಳಿದ 34.35 ಲಕ್ಷಕ್ಕೂ ಹೆಚ್ಚಿನ ಆಸ್ತಿಗಳು ಅನಧಿಕೃತವಾಗಿದ್ದು, ಅವುಗಳಿಂದ ತೆರಿಗೆ ವಸೂಲಿಯಾಗುತ್ತಿಲ್ಲ. ಆದರೂ, ಆ ಆಸ್ತಿಗಳಿಗೆ ನಗರ ಸ್ಥಳೀಯ ಸಂಸ್ಥೆಗಳು ನೀರು, ರಸ್ತೆ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳನ್ನು ನೀಡಬೇಕಿದೆ. ಇದು ನಗರ ಸ್ಥಳೀಯ ಸಂಸ್ಥೆಗಳಿಗೆ ಹೊರೆಯಾಗುತ್ತಿದೆ. ಹೀಗಾಗಿ ಅನಧಿಕೃತ ಕಟ್ಟಡ, ಆಸ್ತಿಗಳಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿ ವಹಿಯಲ್ಲಿ ಖಾತೆ ನೀಡಿ ಆಸ್ತಿ ತೆರಿಗೆ ಸಂಗ್ರಹಿಸುವ ಮಾದರಿಯನ್ನು ಇತರ ನಗರ ಸ್ಥಳೀಯ ಸಂಸ್ಥೆಗಳಿಗೂ ಅಳವಡಿಸಬಹುದು. ಜತೆಗೆ ಆಸ್ತಿಗಳಿಗೆ ಬಿ ಖಾತೆ ನೀಡಿ ದಂಡ ಸಹಿತ ತೆರಿಗೆ ವಸೂಲಿ ಮಾಡಬಹುದಾಗಿದೆ ಎಂದು ಹೇಳಿದರು.
34.35 ಲಕ್ಷ ಅನಧಿಕೃತ ಆಸ್ತಿಗಳಿಂದ 4ರಿಂದ 5 ಸಾವಿರ ರು. ನಿರ್ವಹಣಾ ಶುಲ್ಕ ಅಥವಾ ಆಸ್ತಿ ತೆರಿಗೆ ಸಂಗ್ರಹವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಪಸಮಿತಿಯು ಸರ್ಕಾರಕ್ಕೆ ಸಲ್ಲಿಸುವ ವರದಿಯಲ್ಲಿ ಉಲ್ಲೇಖಿಸಲು ಸಭೆಯಲ್ಲಿ ಚರ್ಚಿಸಲಾಯಿತು. ಅರಣ್ಯ ಕಾಯ್ದೆಯಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸುವುದರ ಜತೆಗೆ, ಒತ್ತುವರಿದಾರರನ್ನು ಬಂಧಿಸಿ ಶಿಕ್ಷೆಗೊಳಪಡಿಸಲೂ ಅವಕಾಶವಿದೆ. ಅದೇ ರೀತಿ ಕಂದಾಯ ಭೂಮಿಯನ್ನು ಒತ್ತುವರಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಲಭ್ಯವಿರುವ ಕಾಯ್ದೆಗೆ ತಿದ್ದುಪಡಿ ತರಬೇಕಿದೆ. ಅರಣ್ಯ ಕಾಯ್ದೆಯಲ್ಲಿನ ಅಂಶಗಳನ್ನೂ ಸೇರಿಸಬಹುದು ಎಂದು ಈಶ್ವರ್ ಖಂಡ್ರೆ ಸಲಹೆ ನೀಡಿದರು.
ಸಚಿವರಾದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಪೌರಾಡಳಿತ ಸಚಿವ ರಹೀಂಖಾನ್, ಅಧಿಕಾರಿಗಳಾದ ಮನೀಷ್ ಮೌದ್ಗಿಲ್ ಸೇರಿದಂತೆ ಇತರರಿದ್ದರು.