ಹುಬ್ಬಳ್ಳಿ: ಉಣಕಲ್‌ನ ಅಯ್ಯಪ್ಪ ದೇವಸ್ಥಾನದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಗಾಯಗೊಂಡಿದ್ದ 9 ಮಂದಿ ಅಯ್ಯಪ್ಪ ಮಾಲಾಧಾರಿಗಳ ಪೈಕಿ ಇಬ್ಬರು ಚಿಕಿತ್ಸೆ ಫಲಿಸದೆ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಿಜಲಿಂಗಪ್ಪ ಬೇಪುರಿ (58), ಸಂಜಯ್ ಸವದತ್ತಿ (18) ಮೃತಪಟ್ಟ ಮಾಲಾಧಾರಿಗಳು.
ಇನ್ನುಳಿದ 7 ಮಂದಿ ಅಯ್ಯಪ್ಪ ಮಾಲಾಧಾರಿಗಳಿಗೆ ಚಿಕಿತ್ಸೆ ಮುಂದುವರಿದಿದೆ. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಅಯ್ಯಪ್ಪ ಮಾಲಾಧಾರಿಗಳಿಗೆ ಕಿಮ್ಸ್ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಡಿಸೆಂಬರ್ 22ರ ರಾತ್ರಿ ಹುಬ್ಬಳ್ಳಿಯ ದೇವಸ್ಥಾನದಲ್ಲಿ ಸಿಲಿಂಡರ್ ಸ್ಫೋಟಗೊಂಡಿತ್ತು.
ಅಯ್ಯಪ್ಪ ಮಾಲಾಧಾರಿಗಳು ದೇಗುಲದಲ್ಲಿ ರಾತ್ರಿ ಮಲಗಿದ್ದಾಗ ಸಿಲಿಂಡರ್ ಸ್ಫೋಟಗೊಂಡಿತ್ತು. ಗ್ಯಾಸ್ ಸೋರಿಕೆಯಾಗಿದ್ದು, ದೀಪದ ಬೆಂಕಿ ತಗುಲಿ ಸ್ಫೋಟಗೊಂಡಿತ್ತು. ಈ ವೇಳೆ 9 ಮಂದಿ ಗಂಭೀರ ಗಾಯಗೊಂಡಿದ್ದರು. ಅವರನ್ನೆಲ್ಲ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಚಿವ ಸಂತೋಷ್ ಲಾಡ್ ಬೆಂಗಳೂರಿನಿಂದ ತಜ್ಞ ವೈದ್ಯರನ್ನು ಕರೆಸಿಕೊಂಡು ಚಿಕಿತ್ಸೆ ಕೊಡಿಸುವ ಕೆಲಸ ಮಾಡಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಆಗಮಿಸಿದ ಇಬ್ಬರು ನುರಿತ ಪ್ಲಾಸ್ಟಿಕ್ ಸರ್ಜರಿ ವೈದ್ಯರು, ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಪರಿಶೀಲನೆ ಮಾಡಿದ್ದಾರೆ. ಇನ್ನೂ ಇದೇ ವೇಳೆ ಮಾತನಾಡಿದ ಸಚಿವ ಸಂತೋಷ್ ಲಾಡ್ ಮೃತ ಭಕ್ತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
ಬುಧವಾರ ಬೆಂಗಳೂರಿನ ತಜ್ಞ ವೈದ್ಯರ ತಂಡ, ಪ್ಲಾಸ್ಟಿಕ್ ಸರ್ಜನ್ ಡಾ.ಕೆ.ಟಿ. ವಿಕ್ಟೋರಿಯಾ ಆಸ್ಪತ್ರೆಯ ರಮೇಶ್ ಮತ್ತು ಬಿಎಂಸಿಆರ್‌ಐನಿಂದ ಡಾ.ಎಂ.ಶಂಕ್ರಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಭಕ್ತರ ಚಿಕಿತ್ಸೆಯ ಮೇಲ್ವಿಚಾರಣೆ ನಡೆಸಿದರು.
ಗಾಯಗೊಂಡ ಒಂಬತ್ತು ಭಕ್ತರಲ್ಲಿ ಎಂಟು ಮಂದಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಘಟನೆ ಹಿನ್ನೆಲೆಯಲ್ಲಿ ಗೃಹ ಸಚಿವ ಜಿ.ಪರಮೇಶ್ವರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತರನ್ನು ಭೇಟಿ ಮಾಡಿದರು.